ತುಮಕೂರು: ಶಾಲಾ ಮಕ್ಕಳು ಕುಡಿಯಲು ನೀರು ಕೇಳಿದರೆ ಮದ್ಯವನ್ನ ನೀಡಿ, ಅವರಿಗೂ ಮದ್ಯಪಾನ ಮಾಡಿಸಿರುವ ಗಂಭೀರ ಆರೋಪವೊಂದು ಶಾಲಾ ಶಿಕ್ಷಕರ ಮೇಲೆ ಕೇಳಿಬಂದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೊಮ್ಮಲದೇವಿಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮೂವರು ಶಿಕ್ಷಕರ ಮೇಲೆ ಈ ಆರೋಪ ಕೇಳಿ ಬಂದಿದೆ. ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಶೈಕ್ಷಣಿಕ ಪ್ರವಾಸ ಹೋಗಿದ್ದರು. ಇದೇ ವೇಳೆ ಪ್ರವಾಸ ಮುಗಿಸಿಕೊಂಡು ಭಾನುವಾರ ರಾತ್ರಿ ವಾಪಸ್ಸಾಗುವಾಗ ಮಕ್ಕಳು ಮನೋರಂಜನೆಗಾಗಿ ಬಸ್ ನಲ್ಲಿ ಡ್ಯಾನ್ಸ್ ಮಾಡಿದ್ದರು. ಈ ಸಂದರ್ಭದಲ್ಲಿ ದಣಿದಿದ್ದ 9 ಹಾಗೂ 10ನೇ ತರಗತಿಯ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಶಿಕ್ಷಕರ ಬಳಿ ಕುಡಿಯಲು ನೀರು ಕೇಳಿದ್ದಾರೆ. ಪ್ರವಾಸದುದ್ದಕ್ಕೂ ಮದ್ಯ ಸೇವಿಸಿ, ಮದ್ಯದೊಂದಿಗೆ ಬೆರಸಿದ್ದ ನೀರಿನ ಬಾಟಲಿಯನ್ನು ಬಸ್ ನಲ್ಲಿ ಇಟ್ಟುಕೊಂಡಿದ್ದ ಶಿಕ್ಷಕರು ಅದೇ ಬಾಟಲಿಯನ್ನು ನೀರು ಎಂದು ಮಕ್ಕಳಿಗೆ ಕೊಟ್ಟು ಕುಡಿಸಿದ್ದಾರೆ ಎಂದು ಶಾಲಾ ಮಕ್ಕಳು ಆರೋಪಿಸಿದ್ದಾರೆ.
Advertisement
Advertisement
ಮುಖ್ಯಶಿಕ್ಷಕ ಸಚ್ಚಿದಾನಂದ್, ಸಹಶಿಕ್ಷಕರಾದ ಶೇಕ್ ಮುಜಾಮಿಲ್ ಹಾಗೂ ರಾಥೋಡ್ ಎನ್ನುವವರ ಮೇಲೆ ಈ ಆರೋಪ ಕೇಳಿಬಂದಿದೆ. ಧರ್ಮಸ್ಥಳ, ಹೊರನಾಡು ಹಾಗೂ ದಕ್ಷಿಣಕನ್ನಡದ ಕೆಲವೆಡೆ ಪ್ರವಾಸ ತೆರಳಿದ್ದು, ಪ್ರವಾಸದಿಂದ ವಾಪಸ್ಸಾಗುವ ಮಾರ್ಗ ಮಧ್ಯೆ ಹಾಸನದ ಬೇಲೂರು ಬಳಿ ಟೀ ಕುಡಿಯಲು ಬಸ್ ನಿಲ್ಲಿಸಿದ್ದ ವೇಳೆ ಮದ್ಯ ತುಂಬಿದ್ದ ನೀರಿನ ಬಾಯಲಿಯನ್ನು ಶಿಕ್ಷಕರು ಮಕ್ಕಳಿಗೆ ಕುಡಿಯಲು ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
Advertisement
ಇದೇ ವೇಳೆ ಕೆಲ ವಿದ್ಯಾರ್ಥಿಗಳು ಜ್ಞಾನ ತಪ್ಪಿದ್ದು, ನಿದ್ರೆಗೆ ಜಾರಿದ್ದಾರೆ. ಇನ್ನೂ ಕೆಲವರು ವಾಂತಿ ಮಾಡಿಕೊಂಡು ಸುಸ್ತಾಗಿದ್ದಾರೆ. ಮಕ್ಕಳು ಇಷ್ಟೆಲ್ಲಾ ಹೇಳಿದರೂ ನಾವು ಯಾವ ತಪ್ಪು ಮಾಡಿಲ್ಲ. ಬೇಕಿದ್ದರೆ ದೇವರ ಮೇಲೆ ಪ್ರಮಾಣ ಮಾಡುತ್ತೀವಿ ಎಂದು ಶಿಕ್ಷಕ ಶೇಕ್ ಮುಜಾಮಿಲ್ ಪ್ರತಿಕ್ರಿಯೆ ನೀಡಿದ್ದಾರೆ. ವಿಷಯ ತಿಳಿದ ಪೋಷಕರು ಶಾಲೆಯ ಶಿಕ್ಷಕರ ವಿರುದ್ಧ ಪ್ರತಿಭಟನೆ ನಡೆಸಿ ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Advertisement
+