– ಯಾರಿಗೂ ಹೇಳದಂತೆ ಶಿಕ್ಷಕನಿಂದ ಬೆದರಿಕೆ
ಚಿಕ್ಕೋಡಿ/ಬೆಳಗಾವಿ: ಶಿಕ್ಷಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದು, ಹಲವು ತಿಂಗಳ ನಂತರ ಶೌಚಾಲಯದಲ್ಲಿಯೇ ಬಾಲಕಿಗೆ ಡೆಲಿವರಿಯಾಗಿದೆ. ಅಲ್ಲದೆ ಮಗುವನ್ನು ಅಲ್ಲಿಯೇ ಬಿಟ್ಟಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಭೀಮಪ್ಪ ಬಸಪ್ಪ ಕುಂಬಾರ(31) ಬಂಧಿತ ಕಾಮುಕ ಶಿಕ್ಷಕ. ಬೆಳಗಾವಿ ಜಿಲ್ಲೆಯ ಶಾಲೆಯ ಶೌಚಾಲಯದಲ್ಲಿ ಹಸಗೂಸು ಪತ್ತೆಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಬೇಧಿಸಲು ಯಶಸ್ವಿಯಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿಯನ್ನೇ ಕಾಮುಕ ಶಿಕ್ಷಕ ಗರ್ಭಿಣಿ ಮಾಡಿರುವುದು ಬೆಳಕಿಗೆ ಬಂದಿದ್ದು, ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಶಾಲೆಯಲ್ಲಿ ಹುಟ್ಟಿದ ಮಗುವನ್ನು ತಾಯಿಯೋರ್ವಳು ಶೌಚಾಲಯದಲ್ಲೆ ಎಸೆದು ಹೋಗಿದ್ದಳು. ಈ ಪ್ರಕರಣವನ್ನ ಬೆನ್ನತ್ತಿದ್ದ ಪೊಲೀಸರು ಅದೇ ಶಾಲೆಯ ವಿದ್ಯಾರ್ಥಿನಿಗೆ ಶಾಲೆಯಲ್ಲೇ ಹೆರಿಗೆ ಆಗಿ ಮಗುವನ್ನು ಅಲ್ಲೇ ಬಿಟ್ಟು ಹೋಗಿರುವುದು ತಿಳಿದಿದೆ.
ಬಳಿಕ ಪ್ರಕರಣದ ಕುರಿತು ವಿಚಾರಣೆ ನಡೆಸಿದಾಗ ಪಾಪಿ ಶಿಕ್ಷಕ ಅದೇ ಶಾಲೆಯ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಶಾಲೆಯಲ್ಲೇ ಅತ್ಯಾಚಾರ ಮಾಡುತ್ತಿದ್ದ. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದುಬಂದಿದೆ.
ಶಿಕ್ಷಕನ ಮೇಲೆ ಅನುಮಾನ ಬಂದು ಪೊಲೀಸರು ಶಾಲಾ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಒಂದೊಂದೇ ಅಂಶವನ್ನು ಪೊಲೀಸರು ಪತ್ತೆ ಹಚ್ಚಿ ಕೊನೆಗೆ ಪಾಪಿ ಶಿಕ್ಷಕನನ್ನು ಬಂಧಿಸಿದ್ದಾರೆ. ಉನ್ನತ ಮೂಲಗಳ ಪ್ರಕಾರ ವಿದ್ಯಾರ್ಥಿನಿ ಬಡ ಕುಟುಂಬದವಳಾಗಿದ್ದು, ಈ ಕುರಿತು ಕುಟುಂಬದವರಿಗೆ ತಿಳಿದಿತ್ತು. ಶಿಕ್ಷಕ ಅವರಿಗೂ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಪಾಪಿ ಶಿಕ್ಷಕನ ವಿರುದ್ಧ ಐಗಳಿ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.