ಮಡಿಕೇರಿ: ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶಿಕ್ಷಕಿಯ ಕುಟುಂಬಸ್ಥರು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡುವಿನಲ್ಲಿ ಶಿಕ್ಷಕಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗ್ರಾಮದ ನಿವಾಸಿ ನಜೀರ್ ಎಂಬವರ ಪತ್ನಿ ಸಫ್ರೀನಾ ಶೇಕ್ (32) ಮೃತ ಶಿಕ್ಷಕಿ. ಮೃತ ಸಫ್ರೀನಾ ನಾಪೋಕ್ಲುವಿನ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬುಧವಾರ ರಾತ್ರಿ ಎಮ್ಮೆಮಾಡುವಿನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನೇಣಿನ ಕುಣಿಕೆಯಿಂದ ಬಿಡಿಸಿ ಪತಿ ನಜೀರ್ ಸಫ್ರೀನಾಳನ್ನು ನಾಪೋಕ್ಲುವಿನ ಖಾಸಗಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿರುವ ಬಗ್ಗೆ ವೈದ್ಯರು ಪರೀಕ್ಷಿಸಿ ದೃಢಪಡಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನವಾದ 4 ದಿನದ ಬಳಿಕ ಸಿಕ್ ಲೀವ್ ಹಾಕಿದ್ರು 100ಕ್ಕೂ ಹೆಚ್ಚು ಪೈಲಟ್‌ಗಳು
ಕಳೆದ ಎರಡು ದಿನಗಳಿಂದ ಪತಿ ನಜೀರ್ ಹಾಗೂ ಸಫ್ರೀನಾ ನಡುವೆ ಮನೆಯಲ್ಲಿ ಸಾಲದ ವಿಚಾರವಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಮೃತ ಸಫ್ರೀನಾ ದೇಹದಲ್ಲಿ ಗಾಯಗಳ ಗುರುತು ಕಂಡು ಬಂದಿದೆ. ಹೀಗಾಗಿ ಪತಿ ನಜೀರ್ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಸಫ್ರೀನಾ ಸಹೋದರ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಸಫ್ರೀನಾ ಸಹೋದರ ರುವೈಸ್ ನಾಪೋಕ್ಲು ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ `ಮಾಸ್ಟರ್ ಪ್ಲ್ಯಾನ್’ – ಕಾಮಗಾರಿಗೆ ಸರ್ಕಾರದಿಂದ 215 ಕೋಟಿ ಅನುಮೋದನೆ