Connect with us

International

ಅಂಗಾಂಗಗಳ ಸೂಟ್ ಧರಿಸಿ ಮಕ್ಕಳಿಗೆ ಶಿಕ್ಷಕಿಯಿಂದ ಪಾಠ

Published

on

ಮ್ಯಾಡ್ರಿಡ್: ಅಂಗಾಂಗಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಅರ್ಥ ಮಾಡಿಸಬೇಕು ಎಂಬ ಉದ್ದೇಶದಿಂದ ಶಿಕ್ಷಕಿಯೊಬ್ಬರು ಮಾನವನ ಅಂಗ ರಚನೆಗಳ ಚಿತ್ರವಿರುವ ಸೂಟ್ ಧರಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಸ್ಪೇನ್‍ನ ಶಾಲೆಯೊಂದರ ಶಿಕ್ಷಕಿ ಈ ಪ್ರಯೋಗ ಮಾಡಿದ್ದು, ಜೀವಶಾಸ್ತ್ರ ತರಗತಿಯ ಸಂದರ್ಭದಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಮನುಷ್ಯನ ಅಂಗಾಗಳ ರಚನೆ ಇರುವ ಸೂಟ್ ಧರಿಸಿ ತಿಳಿಸಿದ್ದಾರೆ. ಶಿಕ್ಷಕಿ ವೆರೋನಿಕಾ ಡ್ಯೂಕ್ 15 ವರ್ಷಗಳ ಅನುಭವ ಹೊಂದಿದ್ದು, ಪ್ರಸ್ತುತ 3ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಇಂಗ್ಲಿಷ್, ಕಲೆ, ಸಮಾಜ ಹಾಗೂ ಸ್ಪ್ಯಾನಿಷ್ ವಿಷಯಗಳನ್ನು ಬೋಧಿಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

43 ವರ್ಷದ ಶಿಕ್ಷಕಿ ಬೋಧಿಸುತ್ತಿರುವ ಶೈಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡ್ಯೂಕ್ ಅವರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಪಾಠ ಮಾಡಲು ಹಾಗೂ ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹಿಡಿದಿಡಲು ಮಾನವನ ದೇಹದ ಅಂಗಾಂಗಳನ್ನು ಸೂಚಿಸುವ ಸೂಟ್ ಹಾಕಿಕೊಂಡೇ ಪಾಠ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಜೀವಶಾಸ್ತ್ರವನ್ನು ಬೋಧಿಸುವುದು ಕಷ್ಟದ ಕೆಲಸವಾಗಿತ್ತು. ಹೀಗಾಗಿ ಅಂಗಾಂಗಳ ದೇಹದ ಸೂಟ್ ಧರಿಸಿ ವಿವರಿಸುವುದೇ ಸೂಕ್ತ ಎಂದು ಈ ಪ್ರಯತ್ನಕ್ಕೆ ಮುಂದಾದೆ ಎಂದು ಶಿಕ್ಷಕಿ ಡ್ಯೂಕ್ ತಿಳಿಸಿದ್ದಾರೆ.

ಒಂದು ದಿನ ಶಿಕ್ಷಕಿಯ ಪತಿ ಶಾಲೆಯ ತರಗತಿ ಕೊಠಡಿಗೆ ತೆರಳಿದ್ದು, ಈ ವೇಳೆ ಕೆಲ ಫೋಟೋಗಳನ್ನು ತೆಗೆದಿದ್ದಾರೆ. ನಂತರ ಈ ಚಿತ್ರಗಳನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದು, ಫುಲ್ ವೈರಲ್ ಆಗಿದೆ. ಅಲ್ಲದೆ ಬಹುತೇಕರು ಶಿಕ್ಷಕಿಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ 66 ಸಾವಿರಕ್ಕೂ ಅಧಿಕ ಲೈಕ್‍ಗಳನ್ನು ಪಡೆದಿದ್ದು, 13 ಸಾವಿರಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

ಪತ್ನಿಯ ಈ ಆಲೋಚನೆ ಕುರಿತು ಹೆಮ್ಮೆಯಾಗುತ್ತಿದೆ. ಇವಳನ್ನು ಪತ್ನಿಯಾಗಿ ಪಡೆದ ನಾನೇ ಅದೃಷ್ಟಶಾಲಿ. ಇಂದು ತನ್ನ ವಿದ್ಯಾರ್ಥಿಗಳಿಗೆ ಮಾನವನ ಅಂಗಾಂಗಗಳ ಕುರಿತು ವಿವರಿಸಿದ ರೀತಿ ತುಂಬಾ ಇಷ್ಟವಾಯಿತು. ಈ ಕುರಿತು ಮಕ್ಕಳು ಸಹ ತುಂಬಾ ಆಸಕ್ತಿಯಿಂದ ಕಲಿತರು ಎಂದು ತಮ್ಮ ಟ್ವೀಟ್ ನಲ್ಲಿ ಶಿಕ್ಷಕಿ ಪತಿ ಬರೆದುಕೊಂಡಿದ್ದಾರೆ.

ಇದೊಂದೆ ಅಲ್ಲ ಡ್ಯೂಕ್ ಅವರು ಈ ಹಿಂದೆ ಹಲವು ಬಾರಿ ಇಂತಹ ಪ್ರಯೋಗಗಳ ಮೂಲಕ ಪಾಠ ಮಾಡಿದ್ದಾರೆ. ಇತಿಹಾಸ ಹಾಗೂ ಇಂಗ್ಲಿಷ್ ವ್ಯಾಕರಣ ಪಾಠ ಮಾಡುವಾಗಲೂ ಇವರು ಕಾರ್ಡ್ ಬೋರ್ಡ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಬಳಸಿ ಪರಿಣಾಮಕಾರಿಯಾಗಿ ಪಾಠ ಮಾಡಿದ್ದರು ಎಂದು ಹೇಳಲಾಗಿದೆ. ಯಾವಾಗಲೂ ಗಂಟು ಮುಖ ಹಾಕಿಕೊಂಡು, ಬೇಸರದಿಂದ ಪಾಠ ಮಾಡುವ ಶಿಕ್ಷಕ, ಶಿಕ್ಷಕಿಯರಲ್ಲಿ ಇದು ಬದಲಾವಣೆ ತರಲಿದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದು ಡ್ಯೂಕ್ ಅಭಿಪ್ರಾಯ ಪಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *