ಶಿವಮೊಗ್ಗ: ಇಲ್ಲಿನ ದುರ್ಗಿಗುಡಿ ಶಾಲೆಯ ಶಿಕ್ಷಕನೋರ್ವ ಪಠ್ಯ ಪುಸ್ತಕದಲ್ಲಿ ಪಾಠದ ಪಾಯಿಂಟ್ಸ್ ಬರೆದುಕೊಳ್ಳುತ್ತಿದ್ದ ಕಾರಣಕ್ಕೆ ವಿದ್ಯಾರ್ಥಿಗೆ ಥಳಿಸಿದ್ದು, ಇದರಿಂದಾಗಿ ವಿದ್ಯಾರ್ಥಿಯ ಭುಜ ಮುರಿತಕ್ಕೆ ಕಾರಣವಾಗಿರುವ ಘಟನೆ ಬೆಳಕಿಗೆ ಬಂದಿದೆ.
ಶಾಲಾ ಶಿಕ್ಷಕನ ಹೊಡೆತಕ್ಕೆ ನಲುಗಿ ವಿದ್ಯಾರ್ಥಿ ಗೌತಮ್ ಭುಜದ ಮೂಳೆ ಮುರಿದಿದೆ. ಗೌತಮ್ ನಗರದ ದುರ್ಗಿಗುಡಿ ಶಾಲೆಯ 7 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಜ. 9 ರಂದು ಶಾಲೆಯಲ್ಲಿ ಕನ್ನಡ ವಿಷಯ ಪಾಠದ ವೇಳೆ ಗೌತಮ್ ಕನ್ನಡ ಪಠ್ಯ ಪುಸ್ತಕದಲ್ಲಿ ಪಾಠದ ಪಾಯಿಂಟ್ಸ್ ಬರೆದುಕೊಳ್ಳುತ್ತಿದ್ದನಂತೆ, ಇದನ್ನ ಗಮನಿಸಿದ ಶಾಲೆಯ ಮೇಷ್ಟ್ರು ಪರಮೇಶ್ವರ್ ರಫ್ ನೋಟ್ ಬುಕ್ ಎಲ್ಲಿ ಎಂದು ವಿಚಾರಿಸಿ ಕೆನ್ನೆಗೆ ಭಾರಿಸಿದ್ದಾರಂತೆ. ತಂದಿಲ್ಲ ಎಂದು ಉತ್ತರ ನೀಡಿರುವ ವಿದ್ಯಾರ್ಥಿಗೆ ಬೆನ್ನಿನ ಮೇಲೆ ಭಾರಿಸಿದ್ದಾರೆ. ಇದರಿಂದಾಗಿ ತರಗತಿಯ ಟೇಬಲ್ ಗೆ ವಿದ್ಯಾರ್ಥಿಯ ಎಡಭುಜ ತಗುಲಿ ಫ್ರಾಕ್ಚರ್ ಆಗಿದೆ.
ಗಾಯಗೊಂಡು ನಲುಗಿದ್ದ ವಿದ್ಯಾರ್ಥಿಗೆ ಪುನಃ ಆ ಕನ್ನಡ ಮೇಷ್ಟ್ರು, ನಾಟಕ ಮಾಡುತ್ತಿಯಾ ಎಂದು ಮತ್ತೆ ಥಳಿಸಿದ್ದಲ್ಲದೇ, ನಿಂದಿಸಿದ್ದಾರೆ. ನಂತರ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕವೂ ಗೌತಮ್‍ಗೆ ಎರಡು ದಿನ ತೀವ್ರವಾಗಿ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆತನನ್ನ ಪುನಃ ಆಸ್ಪತ್ರೆಗೆ ಕರೆದುಕೊಂಡು ತೋರಿಸಿದಾಗ ಭುಜ ಮುರಿದಿದೆ ಎಂದು ತಿಳಿದುಬಂದಿರುವುದಾಗಿ ವಿದ್ಯಾರ್ಥಿಯ ಪಾಲಕರಾದ ಸುಮತಿ ತಿಳಿಸಿದ್ದಾರೆ.
ಒಬ್ಬ ಶಾಲಾ ಶಿಕ್ಷಕನಾದವನಿಗೆ ವಿದ್ಯಾರ್ಥಿಗಳ ಸೂಕ್ಷ್ಮತೆ ಮತ್ತು ಪರಿಸ್ಥಿತಿಯ ಅರಿವಿರಬೇಕು. ಆದರೆ ಈ ಸೂಕ್ಷ್ಮತೆಯ ಅರಿವಿಲ್ಲದ ಕಾರಣ ಮೇಷ್ಟ್ರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv