ತುಮಕೂರು: ವಿದ್ಯಾರ್ಥಿಯೊಬ್ಬ ತಾನು ಓದುತ್ತಿರುವ ಕಾಲೇಜಿನಲ್ಲಿ ಮೂಲಸೌಕರ್ಯ ಸಮಸ್ಯೆ ಹಾಗೂ ಹೆಚ್ಚಿನ ಶುಲ್ಕ ವಸೂಲಿ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿದ್ದಕ್ಕೆ ಪ್ರಾಂಶುಪಾಲ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಆತನ ಮೇಲೆ ಹಲ್ಲೆ ನಡೆಸಿದ ಪ್ರಕರಣವೊಂದು ತುಮಕೂರಿನಲ್ಲಿ ನಡೆದಿದೆ.
ಗೋವಿಂದಪ್ಪ ಪಾವಗಡ ತಾಲೂಕಿನ ಕಡಮಲಕುಂಟೆ ನಿವಾಸಿಯಾಗಿದ್ದು, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದಾನೆ. ಗೋವಿಂದಪ್ಪ ಗಾರೇ ಕೆಲಸ ಮಾಡಿಕೊಂಡು ಅಪ್ಪ-ಅಮ್ಮನಿಗೆ ನೆರವಾಗುತ್ತಿದ್ದ. ಕಾಲೇಜಿನಲ್ಲಿ ಹೆಚ್ಚಿನ ಶುಲ್ಕ ವಸೂಲಿ ಹಾಗೂ ಮೂಲಸೌಕರ್ಯದ ಬಗ್ಗೆ ಮಾಧ್ಯಮದವರ ಬಳಿ ಹೇಳಿಕೊಂಡಿದ್ದಾನೆ. ಇತರ ವಿದ್ಯಾರ್ಥಿಗಳು ಕೂಡ ಕಾಲೇಜಿನ ಸಮಸ್ಯೆ ಬಗ್ಗೆ ಮೀಡಿಯಾದವರಲ್ಲಿ ಹೇಳಿಕೊಂಡಿದ್ದಾರೆ. ಆದರೆ ಈ ವಿದ್ಯಾರ್ಥಿಯ ಹೇಳಿಕೆ ಪತ್ರಿಕೆ, ಟಿವಿಯಲ್ಲಿ ಪ್ರಸಾರವಾಗಿದ್ದರಿಂದ ಸಿಟ್ಟಿಗೆದ್ದ ಕಾಲೇಜು ಪ್ರಾಂಶುಪಾಲ ಹಾಗೂ ದೈಹಿಕ ಶಿಕ್ಷಕ ವಿದ್ಯಾರ್ಥಿಯನ್ನು ಟಾರ್ಗೆಟ್ ಮಾಡಿ ಸ್ಟಾಫ್ ರೂಂನಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ.
Advertisement
Advertisement
ವಿದ್ಯಾರ್ಥಿ ಗೋವಿಂದಪ್ಪ ರ್ಯಾಗಿಂಗ್ ಮಾಡಿದ್ದಾನೆ ಎಂದು ವಿದ್ಯಾರ್ಥಿನಿಯೊಬ್ಬಳಿಂದ ಸುಳ್ಳು ದೂರು ಕೊಡಿಸಿದ್ದಾರೆ. ವಿಚಾರಣೆಗಾಗಿ ಪ್ರಾಂಶುಪಾಲ ನಾರಾಯಣ್ ಹಾಗೂ ದೈಹಿಕ ಶಿಕ್ಷಕ ರವಿಕುಮಾರ್ ಗೋವಿಂದಪ್ಪನನ್ನು ಸ್ಟಾಫ್ ರೂಂಗೆ ಕರೆದಿದ್ದಾರೆ. ಅಲ್ಲಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ರವಿಕುಮಾರ್ ಬೂಟುಕಾಲಿನಿಂದ ಒದ್ದು ಹಲ್ಲೆ ಮಾಡಿದರೆ, ಪ್ರಾಂಶುಪಾಲರು ನೂಕಿ ತಳ್ಳಾಡಿದ್ದಾರೆ. ಪರಿಣಾಮ ವಿದ್ಯಾರ್ಥಿ ಗೋವಿಂದಪ್ಪನ ಬೆನ್ನ ಮೇಲೆ ಗಾಯವಾಗಿದ್ದು, ಸೊಂಟಕ್ಕೆ ಗಂಭೀರ ಗಾಯವಾಗಿ ನಡೆದಾಡಲು ಆಗದೇ ಸಂಕಟ ಪಡುತ್ತಿದ್ದಾನೆ.
Advertisement
ತಮ್ಮ ಮೇಲಿನ ಆರೋಪವನ್ನು ಪ್ರಾಂಶುಪಾಲ ನಾರಾಯಣ್ ಹಾಗೂ ದೈಹಿಕ ಶಿಕ್ಷಕ ರವಿಕುಮಾರ್ ತಳ್ಳಿಹಾಕಿದ್ದಾರೆ. ವಿದ್ಯಾರ್ಥಿ ಗೋವಿಂದಪ್ಪನ ವರ್ತನೆಯೇ ಸರಿಯಿಲ್ಲ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಗಾಯಗೊಂಡ ಗೋವಿಂದಪ್ಪ ಪಾವಗಡ ಪೊಲೀಸರಿಗೆ ದೂರು ಕೊಟ್ಟರೂ ಕೇಸ್ ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಘಟನೆ ಕುರಿತಂತೆ ಆರೋಪ ಪ್ರತ್ಯಾರೋಪ ಏನೇ ಇದ್ದರೂ ಮಾಧ್ಯಮಕ್ಕೆ ಹಲವಾರು ವಿದ್ಯಾರ್ಥಿಗಳು ಹೇಳಿಕೆ ಕೊಟ್ಟಿದ್ದಾರೆ. ಆದರೆ ಗೋವಿಂದಪ್ಪನನ್ನು ಮಾತ್ರ ಯಾಕೆ ಟಾರ್ಗೆಟ್ ಮಾಡಿದ್ದರು ಅನ್ನೋ ಪ್ರಶ್ನೆ ಮೂಡಿದೆ. ಸದ್ಯ ಗೋವಿಂದಪ್ಪ ತನಗಾದ ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಸಿದ್ದಾನೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv