ಭೋಪಾಲ್: ಭಾರತೀಯ ವಾಯುಸೇನೆ ನಡೆಸುವ ಹಾರಾಟ ವಿಭಾಗಕ್ಕೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಧ್ಯಪ್ರದೇಶದ ಮಿಮುಚ್ ಜಿಲ್ಲೆಯಿಂದ ಚಹಾ ಮಾರಾಟ ಮಾಡುವವನ ಪುತ್ರಿ ನೇಮಕಗೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ಅಂಚಲ್ ಗಂಗ್ವಾಲ್(24) ಆಯ್ಕೆಗೊಂಡ ಯುವತಿ. ಮೂಲತಃ ಮಿಮುಚ್ ಜಿಲ್ಲೆಯವರಾದ ಅಂಚಲ್ ವಾಯುಸೇನೆ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಮಧ್ಯಪ್ರದೇಶ ರಾಜ್ಯದಿಂದ ಆಯ್ಕೆಯಾದ ಒಬ್ಬಳೆ ಒಬ್ಬ ಯುವತಿ. ಇವರ ತಂದೆ ಸುರೇಶ್ ಗಂಗ್ವಾಲ್ ಮಿಮುಚ್‍ನ ಬಸ್ ನಿಲ್ದಾಣದ ಬಳಿ ಚಹಾ ಅಂಗಡಿ ನಡೆಸುತ್ತಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಂಚಲ್, ನಾನು 12ನೇ ತರಗತಿಯಲ್ಲಿ ಓದುತ್ತಿರುವಾಗ 2013ರ ಉತ್ತರಾಖಂಡ್‍ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಭಾರತೀಯ ರಕ್ಷಣಾ ಪಡೆಗಳು ನಡೆಸಿದ ರಕ್ಷಣಾ ಕಾರ್ಯಚರಣೆಯಿಂದ ಪ್ರೇರೇಪಣೆಗೊಂಡು ಅಂದೇ ಭಾರತೀಯ ಸೇನೆಗೆ ಸೇರಬೇಕೆಂದು ನಿರ್ಧಾರ ಮಾಡಿಕೊಂಡಿದ್ದೆ. ಆದರೆ ನನ್ನ ಕುಟುಂಬ ನನ್ನನ್ನು ಓದಿಸುವಷ್ಟು ಆರ್ಥಿಕ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ನಾನು ಭಾರತೀಯ ವಾಯುಸೇನೆಯ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡು ಆಯ್ಕೆಯಾಗಿದ್ದೇನೆ ಎಂದು ತಿಳಿಸಿದರು.
MP: Aanchal Gangwal,a tea seller's daughter,makes it to flying branch of Air Force, being the only candidate from MP to clear the admn test for the yr. Says, 'When I was in class 12 I was inspired with Armed Forces' rescue ops during Uttarakhand flood. So decided to join defence. pic.twitter.com/xVKheOfcZ0
— ANI (@ANI) June 23, 2018
ಭಾರತೀಯ ವಾಯುಸೇನಾ ಪರೀಕ್ಷೆಯು ಅಷ್ಟು ಸುಲಭವಾಗಿರಲಿಲ್ಲ. ನಾನು ಹಲವು ವರ್ಷಗಳಿಂದ 5 ಭಾರೀ ಪರೀಕ್ಷೆ ಬರೆದಿದ್ದರೂ ಆಯ್ಕೆಗೊಂಡಿರಲಿಲ್ಲ. ಈ ವರ್ಷ ಬರೆದ ಪರೀಕ್ಷೆಯಲ್ಲಿ ಜೂನ್ 6ರ ಫಲಿತಾಂಶದಲ್ಲಿ ತೇರ್ಗಡೆಯಾಗಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಮಗಳ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ತಂದೆ, ನಾನು ಬಸ್ ನಿಲ್ದಾಣದ ಹತ್ತಿರ ಚಹಾ ವ್ಯಾಪಾರ ಮಾಡುತ್ತಿದ್ದು, ಎಲ್ಲರೂ ನಾಮದೇವ್ ಟೀ ಸ್ಟಾಲ್ ಎಂದೇ ಗುರುತಿಸುತ್ತಾರೆ. ಮಗಳ ಈ ಸಾಧನೆಗೆ ಬರುವ ಗ್ರಾಹಕರು ಅಭಿನಂದನೆ ಸಲ್ಲಿಸಿ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.
ನನ್ನ ಆರ್ಥಿಕ ಸಂಕಷ್ಟದ ನಡುವೆಯೂ ಮೂರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದೇನೆ. ಮಗ ಎಂಜಿನಿಯರಿಂಗ್ ಮಾಡುತ್ತಿದ್ದು, ಮಗಳು 12 ನೇ ತರಗತಿ ಓದುತ್ತಿದ್ದಾಳೆ. ಇಬ್ಬರಿಗೂ ಕೋಚಿಂಗ್ ನೀಡಲು ಸಾಲ ಮಾಡಿ ಸೇರಿಸಿದ್ದೆ ಎಂದು ಈ ವೇಳೆ ಹೇಳಿಕೊಂಡರು.
ದೇಶಾದ್ಯಂತ ಒಟ್ಟು 6 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದು, ಕೇವಲ 22 ಮಂದಿ ಆಯ್ಕೆಗೊಂಡಿದ್ದಾರೆ ಇದರಲ್ಲಿ ಅಂಚಲ್ ಕೂಡ ಒಬ್ಬರಾಗಿದ್ದಾರೆ. ವಾಯುಸೇನಾ ಪಡೆಯು ಅಂಚಲ್‍ಗೆ ಜೂನ್ 30ರೊಳಗಾಗಿ ಹೈದರಾಬಾದ್‍ನ ದುಂಡಿಗಲ್ ಬಳಿ ಇರುವ ಭಾರತೀಯ ವಾಯುಸೇನಾ ಅಕಾಡೆಮಿಗೆ ಸೇರುವಂತೆ ಸೂಚಿಸಿದೆ.