– ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಪಟ್ಟಾಭಿಷೇಕಕ್ಕೆ ಸಿದ್ಧತೆ
ನವದೆಹಲಿ: ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪುನರಾಗಮನಕ್ಕೆ ಸಿದ್ಧವಾಗಿದೆ. ಇತ್ತ ಒಡಿಶಾದಲ್ಲಿ ಸರಳ ಬಹುಮತ ಸಂಖ್ಯೆ ದಾಟಿ ಬಿಜೆಪಿ ಮುಂದೆ ಸಾಗಿದೆ.
ಆಂಧ್ರಪ್ರದೇಶದಲ್ಲಿ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್‌ಆರ್‌ಸಿಪಿ ಕುಸಿತ ಕಂಡಿದೆ. ರಾಜ್ಯದಲ್ಲಿ ಟಿಡಿಪಿ 131, ಜೆಎನ್‌ಪಿ 20, ವೈಎಸ್‌ಆರ್‌ಸಿಪಿ 17, ಬಿಜೆಪಿ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಆಂಧ್ರದಲ್ಲಿ ಗೆಲುವಿನ ಸೂಚನೆ ಸಿಗುತ್ತಿದ್ದಂತೆ ಸರ್ಕಾರ ರಚನೆಗೆ ಚಂದ್ರಬಾಬು ನಾಯ್ಡು ಸಿದ್ಧತೆ ನಡೆಸಿದ್ದಾರೆ. ಮೇ 13ರಂದು ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆದಿತ್ತು. ಮತ್ತೊಂದು ಅವಧಿಗಾಗಿ ವೈಎಸ್‌ಆರ್‌ಸಿಪಿ ಎಲ್ಲಾ 175 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಟಿಡಿಪಿ 144 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (ಜೆಎಸ್‌ಪಿ) 21 ಮತ್ತು ಬಿಜೆಪಿ 10 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು.
ಒಡಿಶಾದಲ್ಲಿ ಆಡಳಿತಾರೂಢ ಬಿಜು ಜನತಾ ದಳ ಪಕ್ಷಕ್ಕೆ ಶಾಕ್ ಎದುರಾಗಿದೆ. 147 ಸದಸ್ಯ ಬಲದ ವಿಧಾನಸಭೆಗೆ ಸರ್ಕಾರ ರಚಿಸಲು 74 ಸ್ಥಾನಗಳು ಬೇಕು. ಈಗಾಗಲೇ ಬಿಜೆಪಿ ಅಷ್ಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಪಕ್ಷ 57 ಸ್ಥಾನಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 13, ಐಎನ್‌ಡಿ 2 ಹಾಗೂ ಸಿಪಿಐ(ಎಂ) 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಒಡಿಶಾದಲ್ಲಿ 2019 ರಲ್ಲಿ ಬಿಜೆಡಿ 147 ಸ್ಥಾನಗಳ ಪೈಕಿ 112 ಸೀಟ್‌ಗಳನ್ನು ಗೆದ್ದಿತ್ತು. ಬಿಜೆಪಿ 23 ಹಾಗೂ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆದ್ದಿತ್ತು.