ಹೈದರಾಬಾದ್: ಶ್ರೀಕಾಕುಲಂನ ಮೆಟ್ಟವಲಸ ಗ್ರಾಮದಲ್ಲಿ ತೆಲಗು ದೇಶಂ ಪಕ್ಷ(ಟಿಡಿಪಿ) ಹಾಗೂ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷದ(ವೈಎಸ್ಆರ್‌ಸಿಪಿ) ನಡುವೆ ಮಂಗಳವಾರ ಸಂಭವಿಸಿದ ಘರ್ಷಣೆಯಲ್ಲಿ 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಕುರಿತಂತೆ ಮಾತನಾಡಿದ ಶ್ರೀಕಾಕುಲಂ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಎಂ. ಅಹ್ಮದ್, ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ಹೀಗಾಗಿ ತೆಲಗು ದೇಶಂ ಪಕ್ಷ(ಟಿಡಿಪಿ) ಹಾಗೂ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷದ(ವೈಎಸ್ಆರ್‌ಸಿಪಿ) ನಡುವೆ ಘರ್ಷಣೆ ನಡೆದಿದೆ ಹಾಗೂ ಘಟನೆಯಲ್ಲಿ ಸುಮಾರು 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ರಾಜಮ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೀಗ ಶ್ರೀಕಾಕುಲಂನ ಮೆಟ್ಟವಲಸ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸರು ಆಯೋಜಿಸಲಾಗಿದೆ ಎಂದರು.
ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಟಿಡಿಪಿ ಬೆಂಬಲಿತ ಅಭ್ಯರ್ಥಿ ಜಯ ಸಾಧಿಸಿದರು. ಇದನ್ನು ಸಹಿಸಲಾಗದ ವೈಎಸ್ಆರ್‌ಸಿಪಿ ಪಕ್ಷದ ಕೆಲ ಕಾರ್ಯಕರ್ತರು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಕೆಲವು ಪೋಸ್ಟ್ ಗಳನ್ನು ಮಾಡಿದ್ದಾರೆ. ವೈಎಸ್ಆರ್‌ಸಿಪಿ ಪಕ್ಷ ಅವಹೇಳನಕಾರಿ ಪೋಸ್ಟ್ ಮಾಡಿದೆ ಎಂದು ಟಿಡಿಪಿ ಪಕ್ಷದವರು ಆರೋಪಿಸಿದರು. ಈ ಹಿನ್ನೆಲೆ ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊನೆಗೆ ಕೋಪ ವಿಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸಿದ್ದಾರೆ.