ತುಮಕೂರು: ಟಿ.ಡಿ(Tetanus and Diphtheria) ಇಂಜೆಕ್ಷನ್ ಹಾಕಿಸಿಕೊಂಡಿದ್ದ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿರುವ ಘಟನೆ ತುಮಕೂರಿನ ಮಧುಗಿರಿ ಪಟ್ಟಣದಲ್ಲಿ ನಡೆದಿದೆ.
ಮಧುಗಿರಿ ಪಟ್ಟಣದ ಚೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5ನೇ ತರಗತಿ ಓದುತಿದ್ದ ನವೀನ್(11) ಮೃತ ದುರ್ದೈವಿ. ಸೋಮವಾರ ಚೇತನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಟಿ.ಡಿ ಇಂಜೆಕ್ಷನ್ ನೀಡಲಾಗಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ನವೀನ್ ಕೈಗೆ ವೈದ್ಯರು ಇಂಜೆಕ್ಷನ್ ಕೊಟ್ಟಿದ್ದರು. ಆದರೆ ಸಂಜೆ 5 ಗಂಟೆ ಸುಮಾರಿಗೆ ಮನೆಗೆ ಬಂದಾಗ ತಲೆ ಸುತ್ತು ಬಂದು ನವೀನ್ ಬಿದ್ದಿದ್ದಾನೆ. ಪೋಷಕರು ತಕ್ಷಣ ತಾಲೂಕಾ ಆಸ್ಪತ್ರೆಗೆ ಕರೆದೊಯ್ಯುವಾಗಲೇ ದಾರಿ ಮಧ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ.
Advertisement
Advertisement
ಮೃತ ನವೀನ್ ಗೋವಿಂದನಹಳ್ಳಿ ಗ್ರಾಮದ ನರೇಂದ್ರ ಮತ್ತು ಪದ್ಮಾ ದಂಪತಿ ಮಗ. ತಮ್ಮ ಮಗನ ಸಾವಿಗೆ ಟಿ.ಡಿ ಇಂಜೆಕ್ಷನ್ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ ಪೋಷಕರ ಆರೋಪವನ್ನು ಡಿ.ಎಚ್.ಓ ಚಂದ್ರಿಕಾ ತಳ್ಳಿಹಾಕಿದ್ದಾರೆ. ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ಟಿ.ಡಿ ಇಂಜೆಕ್ಷನ್ ನೀಡಲಾಗಿದೆ. ಯಾರಿಗೂ ಅಪಾಯ ಆಗಿಲ್ಲ. ವಿದ್ಯಾರ್ಥಿ ನವೀನ್ ಸಾವಿಗೆ ಬೇರೆ ಕಾರಣ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಸತ್ಯಾಸತ್ಯತೆ ತಿಳಿಯಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.