ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಸಂಖ್ಯೆ 19ರಲ್ಲಿ ಚೈನ್ ಲಿಂಕ್ ತುಂಡಾಗಿರುವ (TB Dam Gate Broken) ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುಂಗಾ ನದಿ ಪಾತ್ರದ ಜನಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಈಗಾಗಲೇ 90 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರು ಹೊರಹರಿಸಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಸುಮಾರು 3 ಲಕ್ಷ ಕ್ಯುಸೆಕ್ ನೀರನ್ನು ಹೊರಹರಿಸುವ ಸಾಧ್ಯತೆಯಿದೆ ಎಂದು ಟಿಬಿ ಡ್ಯಾಂ ಮಂಡಳಿ (Tungabhadra Reservoir Board) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಈಗಾಗಲೇ ಬಳ್ಳಾರಿ, ಕೊಪ್ಪಳ (Koppala), ರಾಯಚೂರು ಹಾಗೂ ವಿಜಯನಗರ ನಾಲ್ಕು ಜಿಲ್ಲೆಗಳ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿವೆ. ಸ್ಥಳದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
- Advertisement
- Advertisement
ಹೆಚ್ಚಿನ ನೀರು ಹರಿಸಿದ್ರೆ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗುವ ಆತಂಕ ಉಂಟಾಗಿದೆ. ಅಲ್ಲದೇ ಸಮಸ್ಯೆ ಪರಿಹರಿಸಬೇಕಾದ್ರೆ 65 ಟಿಎಂಸಿ ನೀರು ಖಾಲಿ ಮಾಡಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದು, ಇದರಿಂದ 6 ಲಕ್ಷ ಹೆಕ್ಟೇರ್‌ಗೂ ಅಧಿಕ ಬೆಳಗೆ ನೀರಿನ ಕೊರತೆಯಾಗುವ ಸಾಧ್ಯತೆಯಿದೆ. 65 ಟಿಎಂಸಿ ನೀರು ಖಾಲಿಯಾದ್ರೆ ಒಂದು ಬೆಳೆಗೂ ಡ್ಯಾಂ ನೀರು ಸಾಕಾಗಲ್ಲ. ಬೇಸಿಗೆಯಲ್ಲಿ ಜನರಿಗೆ ಕುಡಿಯೋದಕ್ಕೂ ನೀರು ಸಿಗಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
4 ಜಿಲ್ಲೆಗಳಿಗೆ ಆತಂಕ:
ಅಲ್ಲದೇ 65 ಟಿಎಂಸಿ ನೀರು ಖಾಲಿ ಮಾಡುವುದರಿಂದ 4 ಜಿಲ್ಲೆಯ ಜನರಿಗೆ ಮತ್ತೆ ಜಲಕ್ಷಾಮ ಕಾಡುತ್ತೆ. ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳಿಗೆ ಸಮಸ್ಯೆಯಾಗುತ್ತದೆ ಅಧಿಕಾರಿ ಮೂಲಗಳು ತಿಳಿಸಿವೆ.
ಟಿಬಿ ಡ್ಯಾಂನಲ್ಲಿ ಏನಾಗಿದೆ?
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಸಂಖ್ಯೆ 19ರ ಚೈನ್‌ಲಿಂಕ್ ಶನಿವಾರ (ಆ.10) ತಡರಾತ್ರಿ 11 ಗಂಟೆ ಸುಮಾರಿಗೆ ತುಂಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೈನ್ ಲಿಂಕ್ ತುಂಡಾಗಿರುವ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ನೀರಿನ ರಭಸಕ್ಕೆ ತುಂಡಾಗಿರುವ ಭಾಗವೂ ಕಾಣುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.