ಬೆಂಗಳೂರು: ಶಶಾಂಕ್ ಸಿನಿಮಾಸ್ ಅಡಿಯಲ್ಲಿ ಶಶಾಂಕ್ ಅವರೇ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರೋ ಚಿತ್ರ ತಾಯಿಗೆ ತಕ್ಕ ಮಗ. ಈಗಾಗಲೇ ಮಾಧುರ್ಯದ ಹಾಡುಗಳು ಮತ್ತು ಎನರ್ಜೆಟಿಕ್ ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ.
‘ತಾಯಿಗೆ ತಕ್ಕ ಮಗ’ ಶಶಾಂಕ್ ಅವರ ಸ್ವಂತ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿರೋ ಮೊದಲ ಚಿತ್ರ. ಆದ್ದರಿಂದಲೇ ಆರಂಭವೇ ಅದ್ಧೂರಿಯಾಗಿರಬೇಕೆಂಬ ಮಹದಾಸೆಯಿಂದ ಪ್ರತಿಯೊಂದರಲ್ಲಿಯೂ ನಿಗಾ ವಹಿಸಿಯೇ ಈ ಚಿತ್ರವನ್ನು ರೂಪಿಸಿದ್ದಾರೆ. ಶಶಾಂಕ್ ಈ ಕಥೆಯನ್ನೂ ಕೂಡಾ ಅದಕ್ಕೆ ತಕ್ಕುದಾಗಿಯೇ ಹೊಸೆದಿದ್ದಾರಂತೆ. ಆದ್ದರಿಂದಲೇ ಬಿಡುಗಡೆಯ ಹೊಸ್ತಿಲಲ್ಲಿಯೇ ಗೆಲುವಿನ ಸೂಚನೆ ಮಿರುಗಲಾರಂಭಿಸಿದೆ.
ಇದು ಶಶಾಂಕ್ ಮತ್ತು ಅಜೇಯ್ ರಾವ್ ಒಟ್ಟಾಗಿ ರೂಪಿಸಿದ ಮೂರನೇ ಚಿತ್ರ. ಅಜೇಯ್ ರಾವ್ ಅವರ ವೃತ್ತಿ ಜೀವನದಲ್ಲಿದು ಇಪ್ಪತೈದನೇ ಚಿತ್ರ. ಬಹಳಷ್ಟು ಕಷ್ಟಪಟ್ಟು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅಜೇಯ್ ರಾವ್ ಈ ಹಾದಿಯಲ್ಲಿ ಹದಿನೈದು ವರ್ಷ ಸಾಗಿ ಬಂದಿದ್ದಾರೆ. ಅದನ್ನು ತಾಯಿಗೆ ತಕ್ಕ ಮಗ ಚಿತ್ರ ಸಾರ್ಥಕಗೊಳಿಸಲಿದೆ ಎಂಬ ಭರವಸೆಯನ್ನೂ ಹೊಂದಿದ್ದಾರೆ.
ಕಳೆದ ಹದಿನೈದು ವರ್ಷದ ಅಜೇಯ್ ರಾವ್ ಬಣ್ಣದ ಬದುಕನ್ನೊಮ್ಮೆ ಅವಲೋಕಿಸಿದರೆ ಅವರು ಈವರೆಗೂ ಲವರ್ ಬಾಯ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿದ್ದಾರೆ. ಆದರೆ ಅವರ ಪ್ರಧಾನ ಆಸಕ್ತಿ ಆಕ್ಷನ್‍ನತ್ತಲೇ ಇತ್ತೆಂಬುದು ಅಚ್ಚರಿಯಾದರೂ ಸತ್ಯ. ಅಷ್ಟಕ್ಕೂ ಅಜೇಯ್ ರಾವ್ ಶಾಲಾ ದಿನಗಳಿಂದಲೇ ಕರಾಟೆ ಚಾಂಪಿಯನ್. ಈ ಚಿತ್ರದಲ್ಲಿ ಕರಾಟೆ ಪಟ್ಟುಗಳನ್ನೂ ಕೂಡಾ ಅಜೇಯ್ ಪ್ರದರ್ಶಿಸಿದ್ದಾರಂತೆ!
ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಗಿರಿ ಮಹೇಶ್ ಸಂಕಲನ ಹಾಗೂ ಕೆ.ರವಿವರ್ಮ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣ ಅಜೇಯ್ ರಾವ್, ಸುಮಲತಾ ಅಂಬರೀಶ್, ಆಶಿಕಾ ರಂಗನಾಥ್, ಅಚ್ಯುತಕುಮಾರ್, ಸಾಧುಕೋಕಿಲ, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳೆ ಮುಂತಾದವರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews