ರಾಯಚೂರು: ಮೈಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಸಂಸ್ಕೃತಿಯ ಒಂದು ಭಾಗವಾಗಿ ಹಿಂದಿನಿಂದಲೂ ಬೆಳೆದು ಬಂದಿದೆ. ಆದರೆ ಈಗ ಆಧುನಿಕ ಯುಗದಲ್ಲಿ ಟ್ಯಾಟೂ ಕಲೆ ಜನರಲ್ಲಿ ಹುಚ್ಚು ಹಿಡಿಸಿದೆ.
ಮೊದಲು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದರು. ಆದರೆ ಈಗ ಗ್ರಾಮೀಣ ಭಾಗಕ್ಕೂ ಲಗ್ಗೆ ಇಟ್ಟಿದೆ. ರಾಯಚೂರಿನಲ್ಲಿ ಟ್ಯಾಟೂ ಜನರಿಗೆ ಬಹಳ ಇಷ್ಟವಾಗಿದೆ. ಯುವಕರೊಬ್ಬರು ಶಿವಾಜಿ ಮಹಾರಾಜ್ ಚಿತ್ರವನ್ನ ತನ್ನ ಸಂಪೂರ್ಣ ಬೆನ್ನಿನ ಮೇಲೆ ಹಾಕಿಸಿಕೊಂಡಿದ್ದಾರೆ.
Advertisement
ಭಾವನಾತ್ಮಕ ಸಂಬಂಧಗಳನ್ನ ಮೈಮೇಲೆ ಕೊನೆವರೆಗೂ ಉಳಿಸಿಕೊಳ್ಳಲು ಯುವಜನತೆ ಈಗ ಟ್ಯಾಟೂಗೆ ಮೊರೆ ಹೋಗುತ್ತಿದ್ದಾರೆ. ತಮ್ಮ ನೆಚ್ಚಿನ ಸಿನೆಮಾ ನಟರು, ಅಪ್ಪ, ಅಮ್ಮ, ಸಹೋದರ, ಸಹೋದರಿ, ಸ್ನೇಹಿತರ ಚಿತ್ರದ ಟ್ಯಾಟೂಗಳನ್ನ ಮೈಮೇಲೆ ಹಾಕಿಸಿಕೊಳ್ಳುತ್ತಿದ್ದಾರೆ. ಯುವಕರು ಮಾತ್ರವಲ್ಲದೇ ವಯಸ್ಕರು ಸಹ ಟ್ಯಾಟೂ ಹಾಕಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.
Advertisement
ಅಂದಹಾಗೇ ಈ ಟ್ಯಾಟೂಗಳನ್ನ ನೋಡಿ ಗೋವಾ, ಮುಂಬೈ, ಬೆಂಗಳೂರಿನ ಕಲಾವಿದರ ಚಿತ್ರಗಳು ಇರಬೇಕು ಅನ್ಕೋಬೇಡಿ. ಇದು ರಾಯಚೂರಿನ ಸಿಂಧನೂರಿನ ಕಲಾವಿದ ಶಂಕರ್ ಬದಿಯ ಕೈಚಳಕ. ಶಿವಾಜಿ ಅಭಿಮಾನಿ ತನ್ನ ಸಂಪೂರ್ಣ ಬೆನ್ನ ಮೇಲೆ ಶಿವಾಜಿ ಟ್ಯಾಟೂವನ್ನ ಇವರ ಕೈಯಲ್ಲಿ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂ ಪೂರ್ಣಗೊಳ್ಳಲು ಸುಮಾರು 12 ಗಂಟೆಗಳ ಕಾಲ ಹಿಡಿದಿದೆ. ರಾಯಚೂರಿನಂತ ಹಿಂದುಳಿದ ಪ್ರದೇಶದಲ್ಲೂ ಜನ ಫ್ಯಾಷನ್ ಅಂತಲೋ, ಕ್ರೇಜ್‍ಗೋ ಗೊತ್ತಿಲ್ಲಾ ಟ್ಯಾಟೂ ಕಲೆಗೆ ಮಾರು ಹೋಗುತ್ತಿದ್ದಾರೆ
Advertisement
ಸಿಂಧನೂರು ಪಟ್ಟಣದಲ್ಲೇ ವಾಸವಿರುವ ಟ್ಯಾಟೂ ಕಲಾವಿದ ಶಂಕರ್ ಬದಿ ಕಳೆದ ಎರಡು ವರ್ಷಗಳಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ಟ್ಯಾಟೂ ಹಾಕಿದ್ದಾರೆ. ಗ್ರಾಮೀಣ ಭಾಗದ ಜನರಲ್ಲೂ ಟ್ಯಾಟೂ ಆಸಕ್ತಿ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಅನ್ನೋದು ಇಲ್ಲೇ ತಿಳಿಯುತ್ತದೆ.
Advertisement
ಯಾವುದೇ ಅಡ್ಡ ಪರಿಣಾಮಗಳು ಆಗದಂತೆ ಹೈಜನಿಕ್ ಆಗಿ ಟ್ಯಾಟೂ ಬಿಡಿಸುವ ಶಂಕರ್ ತಮ್ಮ ಕಲೆಯಿಂದ ರಾಯಚೂರಿನಲ್ಲಿ ಟ್ಯಾಟೂ ಶಂಕರ್ ಅಂತಲೇ ಹೆಸರು ಮಾಡಿದ್ದಾರೆ. ಟ್ಯಾಟೂ ಆಸಕ್ತಿ ಜನರಲ್ಲಿ ಹೆಚ್ಚಾಗುತ್ತಿದ್ದ ಹಾಗೆಯೇ ಜಿಲ್ಲೆಯಲ್ಲಿ ಟ್ಯಾಟೂ ಕಲಾವಿದರ ಸಂಖ್ಯೆಯೂ ಕೂಡ ಹೆಚ್ಚಳವಾಗುತ್ತಿದೆ. ಅದೇನೇ ಇದ್ದರೂ ಮೈಮೇಲೆ ಚಿತ್ರ ಬಿಡಿಸಿಕೊಂಡು ಓಡಾಡೋ ಜನ ಈಗ ರಾಯಚೂರು ಜಿಲ್ಲೆಯ ಹಳ್ಳಿಹಳ್ಳಿಯಲ್ಲೂ ಕಾಣಸಿಗುತ್ತಿರುವುದಂತೂ ನಿಜ.