ಅಯೋಧ್ಯೆ: ಪ್ರತಿನಿತ್ಯ ಸಾವಿರಾರು ಭಕ್ತರನ್ನು ಆಕರ್ಷಿಸುವ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಇದೀಗ ಟಾಟಾ ಸನ್ಸ್ ಸಂಸ್ಥೆಯು (TaTa Sons) 650 ಕೋಟಿ ವೆಚ್ಚದಲ್ಲಿ ದೇಗುಲಗಳ ಮ್ಯೂಸಿಯಂ ( Museum of Temples) ಅನ್ನು ಸ್ಥಾಪಿಸಲು ಮುಂದಾಗಿದೆ.
ಉತ್ತರ ಪ್ರದೇಶ ಸಚಿವ ಸಂಪುಟ (Uttarpradesh Cabinet) ಮಂಗಳವಾರ ಟಾಟಾ ಗ್ರೂಪ್‌ನ ಮಾತೃ ಸಂಸ್ಥೆಯಾಗಿರುವ ಟಾಟಾ ಸನ್ಸ್‌ನ ಈ ಯೋಜನೆಗೆ ಹಸಿರು ನಿಶಾನೆ ತೋರಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಯುಪಿ ಪ್ರವಾಸೋದ್ಯಮ ಸಚಿವ ಜೈವಿರ್ ಸಿಂಗ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಟಾಟಾ ಸನ್ಸ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ಅಡಿಯಲ್ಲಿ 650 ಕೋಟಿ ರೂಪಾಯಿ ವೆಚ್ಚದಲ್ಲಿ ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ಕೇಂದ್ರ ಸರ್ಕಾರದ ಮೂಲಕ ಯೋಜನೆಯನ್ನು ಪ್ರಸ್ತಾಪಿಸಿದೆ ಎಂದು ಹೇಳಿದರು.
ಈ ಅತ್ಯಾಧುನಿಕ ವಸ್ತುಸಂಗ್ರಹಾಲಯವು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಪೂರೈಸುತ್ತದೆ. ಭಾರತದ ಪ್ರಸಿದ್ಧ ದೇವಾಲಯಗಳ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತದೆ ಎಂದರು. ಇದನ್ನೂ ಓದಿ: ರಾಮಮಂದಿರದಲ್ಲಿ ಭಕ್ತರೆಲ್ಲಾ ಸಮಾನರು – ಅರ್ಚಕರು ವಿಐಪಿಗಳಿಗೆ ತಿಲಕ ಇಡುವಂತಿಲ್ಲ
ವಸ್ತುಸಂಗ್ರಹಾಲಯದ ಕುರಿತು ಕಳೆದ ವರ್ಷವೇ ಚಿಂತನೆ ನಡೆಸಲಾಗಿದ್ದು, ಸಿಎಂ ಆದಿತ್ಯನಾಥ್ ಹಾಗೂ ಹಿರಿಯ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಈ ಕುರಿತು ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ ದೇವಾಲಯದ ವಸ್ತುಸಂಗ್ರಹಾಲಯದ ಕಲ್ಪನೆಯನ್ನು ಮೋದಿಯವರು ಇಷ್ಟಪಟ್ಟಿದ್ದಾರೆ. ನಂತರ ಈ ಕುರಿತು ವಿವರವಾಗಿ ಚರ್ಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಈ ಹಿಂದೆ ಮಾಧ್ಯಮಕ್ಕೆ ತಿಳಿಸಿದ್ದರು.
ಇದಲ್ಲದೇ ದೇವಾಲಯದ ಪಟ್ಟಣದಲ್ಲಿ 100 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಟಾಟಾ ಸನ್ಸ್‌ನ ಮತ್ತೊಂದು ಪ್ರಸ್ತಾವನೆಗೆ ಯುಪಿ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂಬುದಾಗಿ ವರದಿಯಾಗಿದೆ.