ದೇಶದಲ್ಲೇ ಫಸ್ಟ್‌ ಟಾಟಾ ನೆಕ್ಸನ್‌ ಇವಿ ಕಾರಿಗೆ ಬೆಂಕಿ – ಕೇಂದ್ರದ ಮೂರು ಸಂಸ್ಥೆಗಳಿಂದ ತನಿಖೆ

Public TV
2 Min Read
TATA NEXON FIRE 2

ಮುಂಬೈ: ದೇಶದಲ್ಲಿ ಎಸ್‌ಯುವಿ ಪೈಕಿ ಅತೀ ಹೆಚ್ಚು ಬೇಡಿಕೆ ಇರುವ ಟಾಟಾ ನೆಕ್ಸನ್‌ ಎಲೆಕ್ಟ್ರಿಕ್‌ ಕಾರು ಬೆಂಕಿ ತಗುಲಿ ಹೊತ್ತಿ ಉರಿದಿದೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ.

ಬುಧವಾರ ತಡರಾತ್ರಿ ಮುಂಬೈನಲ್ಲಿ 2 ತಿಂಗಳ ಹಿಂದೆ ಖರೀದಿಸಿದ್ದ ನೆಕ್ಸನ್‌ ಕಾರು ಹೊತ್ತಿ ಉರಿದಿದೆ. ದೇಶದಲ್ಲಿ ಮೊದಲ ಬಾರಿಗೆ ಇವಿ ಕಾರಿಗೆ ಬೆಂಕಿ ತಗುಲಿದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಕೇಂದ್ರ ಸರ್ಕಾರ ತನಿಖೆ ನಡೆಸುವುದಾಗಿ ಹೇಳಿದೆ. ಟಾಟಾ ಮೋಟಾರ್ಸ್‌ ಸಹ ತನಿಖೆ ನಡೆಸುವುದಾಗಿ ತಿಳಿಸಿದೆ.

TATA NEXON FIRE 3

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಅಗ್ನಿ ಸ್ಫೋಟಕ ಮತ್ತು ಪರಿಸರ ಸುರಕ್ಷತೆ ಕೇಂದ್ರ (CFEES), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮತ್ತು ವಿಶಾಖಪಟ್ಟಣದಲ್ಲಿರುವ ನೌಕಾ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯ (NSTL)ಕ್ಕೆ ಈ ಘಟನೆಗೆ ಕಾರಣವನ್ನು ಪತ್ತೆಹಚ್ಚಿ ಪರಿಹಾರ ಕ್ರಮವನ್ನು ಸೂಚಿಸುವಂತೆ ಆದೇಶಿಸಿದೆ.

“ಬೆಂಕಿ ಅವಘಢಕ್ಕೆ ಕಾರಣ ಏನೆಂಬುದನ್ನು ಪತ್ತೆ ಮಾಡಲು ವಿಸ್ತೃತ ತನಿಖೆ ಆರಂಭಿಸಲಾಗಿದೆ. ತನಿಖೆಯ ಬಳಿಕ ಈ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡುತ್ತೇವೆ. ನಮ್ಮ ವಾಹನಗಳು ಹಾಗೂ ಅವುಗಳ ಬಳಕೆದಾರರ ಸುರಕ್ಷತೆಯನ್ನು ಖಚಿತ ಪಡಿಸಲು ನಾವು ಬದ್ಧರಾಗಿದ್ದೇವೆ” ಎಂದು ಟಾಟಾ ಮೋಟಾರ್ಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

TATA NEXON FIRE 1

ನಾವು 30,000 ಕ್ಕೂ ಅಧಿಕ ಎಲೆಕ್ಟ್ರಿಕ್‌ ಕಾರನ್ನು ಮಾರಾಟ ಮಾಡಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 100 ಮಿಲಿಯನ್‌ ಕಿಲೋಮೀಟರ್‌ಗೂ ಅಧಿಕ ದೂರವನ್ನು ಈ ಕಾರುಗಳು ಕ್ರಮಿಸಿವೆ. ಆದರೆ ಬೆಂಕಿ ಹತ್ತಿಕೊಂಡ ಮೊದಲ ಪ್ರಕರಣ ಇದು ಎಂದು ಕಂಪನಿ ತಿಳಿಸಿದೆ.

ವಿಡಿಯೋದಲ್ಲಿ ಲಭಿಸಿದ ಮಾಹಿತಿ ಪ್ರಕಾರ, ಕಚೇರಿಯಲ್ಲಿ ಅಳವಡಿಸಲಾಗಿದ್ದ ಸಾಮಾನ್ಯ ಸ್ಲೋ ಚಾರ್ಜರ್‌ನಲ್ಲಿ ಮಾಲೀಕ ಕಾರನ್ನು ಚಾರ್ಜ್‌ ಮಾಡಿ ಮನೆ ಕಡೆ ತೆರಳಿದ್ದಾರೆ. 5 ಕಿ.ಮೀ ಕ್ರಮಿಸುವಾಗ ಕಾರಿನಿಂದ ವಿಚಿತ್ರವಾದ ಶಬ್ಧ ಕೇಳಿದೆ. ಈ ಸಂದರ್ಭದಲ್ಲಿ ಕಾರಿನ ಡಿಸ್ಪ್ಲೆಯಲ್ಲಿ ಅಪಾಯದ ಮುನ್ಸೂಚನೆ ಪ್ರಕಟವಾಗಿದೆ.

“ಕಾರಿನಿಂದ ಇಳಿಯಿರಿ” ಎಂಬ ಅಲರ್ಟ್‌ ಸಂದೇಶ ಬಂದ ಕೂಡಲೇ ಮಾಲೀಕ ಇಳಿದಿದ್ದಾರೆ. ಕೆಲ ಕ್ಷಣದಲ್ಲೇ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದೆ.

ಭಾರತದ ಎಲೆಕ್ಟ್ರಿಕ್‌ ಕಾರುಗಳ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸನ್‌ ಬಹಳ ಬೇಡಿಕೆಯಿದೆ. ತಿಂಗಳಿಗೆ ಕನಿಷ್ಠ 2500 – 3000 ಸಾವಿರ ಕಾರುಗಳು ಮಾರಾಟವಾಗುತ್ತಿವೆ. ಇಲ್ಲಿಯವರೆಗೆ ಸುಮಾರು 30,000 ಕ್ಕೂ ಅಧಿಕ ಟಾಟಾ ನೆಕ್ಸನ್‌ ಇವಿ ಕಾರುಗಳು ಮಾರಾಟವಾಗಿದ್ದು ಈ ಸೆಗ್ಮೆಂಟ್‌ನಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *