ಹೋಟೆಲ್‌ನಲ್ಲಿ ಸಿಗುವ ಚೈನೀಸ್, ಕೊರಿಯನ್, ಮೆಕ್ಸಿಕನ್ ಶೈಲಿಯ ಅಡುಗೆ ತಿನ್ನಲು ರುಚಿ ಎನಿಸುತ್ತದೆ. ಆದ್ರೆ ಇದನ್ನ ಮಾಡಲು ತುಂಬಾ ಕಷ್ಟಪಡಬೇಕು ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ಕೆಲವೊಂದು ರೆಸಿಪಿಗಳು ಮನೆಯಲ್ಲೇ ಸುಲಭವಾಗಿ ಮಾಡಿ ಆನಂದಿಸಬಹುದು. ಅಂತಹ ರೆಸಿಪಿಗಳಲ್ಲಿ ಮೆಕ್ಸಿಕನ್ ರೈಸ್ ಕೂಡ ಒಂದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಮಕ್ಕಳ ಲಂಚ್ ಬಾಕ್ಸ್‌ಗೆ ಸುಲಭವಾಗಿ ಮಾಡಬಹುದಾದ ಮೆಕ್ಸಿಕನ್ ರೈಸ್ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಿದ್ರೆ ನೀವೂ ಒಂದ್ಸಲ ಇದನ್ನು ಮಾಡಿ ನೋಡಿ. ಖಂಡಿತವಾಗಿಯೂ ನಿಮ್ಮ ಮಕ್ಕಳು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.
ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಅನ್ನ – 2 ಕಪ್
ಎಣ್ಣೆ – 2 ಚಮಚ
ಬೆಳ್ಳುಳ್ಳಿ – 1 ಚಮಚ
ಈರುಳ್ಳಿ – 1
ಟೊಮೇಟೋ – 1
ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ – ಕಾಲು ಕಪ್
ಸ್ವೀಟ್ ಕಾರ್ನ್ ಅಥವಾ ರಾಜ್ಮಾ – ಅರ್ಧ ಕಪ್
ರೆಡ್ ಚಿಲ್ಲಿ ಪೌಡರ್ – ಅರ್ಧ ಚಮಚ
ಜೀರಿಗೆ ಪುಡಿ – ಅರ್ಧ ಚಮಚ
ಒರಿಗ್ಯಾನೋ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – 1 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿದ ಬಳಿಕ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಸಾಫ್ಟ್ ಆಗುವವರೆಗೆ ಹುರಿಯಿರಿ.
* ನಂತರ ಟೊಮೇಟೋ ಸೇರಿಸಿ ಮೃದುವಾಗುವವರೆಗೆ ಬಾಡಿಸಿ. ತರಕಾರಿಗಳು, ಸ್ವೀಟ್ ಕಾರ್ನ್ ಅಥವಾ ರಾಜ್ಮಾ ಸೇರಿಸಿ ಎರಡು-ಮೂರು ನಿಮಿಷ ಬೇಯಿಸಿ.
* ಈಗ ಚಿಲ್ಲಿ ಪೌಡರ್, ಜೀರಿಗೆ ಪುಡಿ, ಒರಿಗ್ಯಾನೋ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಬೇಯಿಸಿದ ಅನ್ನ ಸೇರಿಸಿ ಮಿಕ್ಸ್ ಮಾಡಿ.
* ಕೊನೆಯಲ್ಲಿ ನಿಂಬೆ ರಸ ಹಾಕಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮೆಕ್ಸಿಕನ್ ರೈಸ್ ಸವಿಯಲು ಸಿದ್ಧ.



