ಪನೀರ್ ಅನೇಕರಿಗೆ ಪ್ರಿಯವಾದದ್ದು. ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಪನೀರ್‌ನಲ್ಲಿ ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶಗಳ ಮಿಶ್ರಣ ಲಭ್ಯವಿರುವ ಕಾರಣ, ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಇದೊಂದು ಅತ್ಯುತ್ತಮವಾದ ಆಹಾರ ಎಂದು ಹೇಳಬಹುದು. ಪನೀರ್‌ನಲ್ಲಿ ಅತ್ಯುತ್ತಮವಾದ ಕ್ಯಾಲ್ಸಿಯಂ ಅಂಶ ಇರುವ ಕಾರಣ ಎಲ್ಲಾ ವಯಸ್ಸಿನವರಿಗೂ ಅವರ ದೇಹಕ್ಕೆ ಅನುಗುಣವಾದ ಪೌಷ್ಟಿಕ ಸತ್ವಗಳು ಪನೀರ್‌ನಿಂದ ಸಿಗುತ್ತವೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವ ಚಿಲ್ಲಿ ಗಾರ್ಲಿಕ್ ಪನೀರ್ ಅನ್ನು ಮನೆಯಲ್ಲೇ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವು ಕೂಡ ನಿಮ್ಮ ಮನೆಯಲ್ಲಿ ಒಂದ್ಸಲ ಇದನ್ನು ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಪನೀರ್ – 200 ಗ್ರಾಂ
ಮೆಣಸಿನಕಾಯಿ – 2
ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಕೊತ್ತಂಬರಿ ಪುಡಿ – 1 ಚಮಚ
ಕಸೂರಿ ಮೇತಿ – 1 ಚಮಚ
ಬೆಳ್ಳುಳ್ಳಿ ಎಸಳು – 8
ಮೊಸರು – ಅರ್ಧ ಕಪ್
ಗರಂ ಮಸಾಲ – ಅರ್ಧ ಚಮಚ
ಖಾರದಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – 2 ಚಮಚ
ಮಾಡುವ ವಿಧಾನ:
* ಒಂದು ಬೌಲ್‌ನಲ್ಲಿ ಮೊಸರು, ನಿಂಬೆ ರಸ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಕೊತ್ತಂಬರಿ ಪುಡಿ, ಕಸೂರಿ ಮೇತಿ, ಖಾರದಪುಡಿ ಮತ್ತು ರುಚಿಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಬಳಿಕ ಇದೇ ಬೌಲ್‌ಗೆ ಪನೀರ್ ತುಂಡುಗಳನ್ನು ಸೇರಿಸಿ ಅದರೊಂದಿಗೆ ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ. ಇದನ್ನ ಅರ್ಧ ಗಂಟೆಯವರೆಗೆ ಪಕ್ಕಕ್ಕೆ ಇರಿಸಿ.
* ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಮಿಶ್ರಣ ಮಾಡಿ.
* ನಂತರ ಮೊದಲೇ ಮ್ಯಾರಿನೇಟ್ ಮಾಡಿದ ಪನೀರ್ ತುಂಡುಗಳನ್ನು ಬಾಣಲೆಯಲ್ಲಿ ಒಂದೊಂದಾಗಿ ಫ್ರೈ ಮಾಡಿ. ಎಲ್ಲವನ್ನೂ ಬಾಣಲೆಗೆ ಹಾಕಿದ ನಂತರ ಅದರ ಮೇಲೆ ಮುಚ್ಚಳವನ್ನು ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. ಪನೀರ್ ತುಂಡುಗಳು ಚೆನ್ನಾಗಿ ಬೇಯುವವರೆಗೆ ನೋಡಿಕೊಳ್ಳಿ.
* ನಂತರ ಮುಚ್ಚಳ ತೆಗೆದು ಈ ಪನೀರ್ ಅನ್ನು ಫ್ರೈ ಮಾಡಿ. ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿದರೆ ಟೇಸ್ಟಿ ಚಿಲ್ಲಿ ಗಾರ್ಲಿಕ್ ಪನೀರ್ ಸವಿಯಲು ಸಿದ್ಧ.
* ಇದು ಮಧ್ಯಾಹ್ನದ ಊಟ, ಸಂಜೆ ಸ್ನ್ಯಾಕ್ಸ್‌ಗೆ ಹೇಳಿ ಮಾಡಿಸಿದ ತಿನಿಸು.