ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಪ್ರತಿ ಸುಂಕ ಸಮರದಿಂದಾಗಿ (Tariffs War) ಭಾರತದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಜಿಗಿದಿದೆ. ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಒಂದೇ ದಿನ ಚಿನ್ನದ ಬೆಲೆ 6,250 ರೂ. ಏರಿಕೆಯಾಗಿದ್ದು 96,450 ರೂ.ಗಳ ಸಾರ್ವಕಾಲಿಕ ಗಡಿ ದಾಟಿದೆ. ಈ ಮೂಲಕ 1 ಲಕ್ಷ ರೂ.ನತ್ತ ದಾಪುಗಾಲು ಹಾಕಿದೆ.
ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಪ್ರಕಾರ, ಶುಕ್ರವಾರ ದೆಹಲಿಯಲ್ಲಿ ಚಿನ್ನದ ಬೆಲೆ (Gold Price) 6,250 ರೂ.ಗಳಷ್ಟು ಜಿಗಿತ ಕಂಡಿದೆ. ಸ್ಥಳೀಯ ಆಭರಣ ವ್ಯಾಪಾರಿಗಳಿಂದಲೂ ಬೇಡಿಕೆ ಹೆಚ್ಚಿದ ಪರಿಣಾಮ 10 ಗ್ರಾಂ ಚಿನ್ನದ ಬೆಲೆ 96,450 ರೂ.ಗಳಿಗೆ ಏರಿಕೆ ಕಂಡು ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಬಿಕ್ಕಟ್ಟೇ ಚಿನ್ನದ ಬೆಲೆ ಏರಿಕೆಗೆ ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಇದನ್ನೂ ಓದಿ: ಟ್ರಂಪ್ Vs ಕ್ಸಿ ಜಿನ್‌ಪಿಂಗ್ – ಈಗ ಅಮೆರಿಕದ ವಸ್ತುಗಳಿಗೆ 125% ತೆರಿಗೆ ಹಾಕಿದ ಚೀನಾ
ಬುಧವಾರ 99.9 ರಷ್ಟು ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 90,200 ರೂ. ಇತ್ತು. ಮಹಾವೀರ ಜಯಂತಿ ಪ್ರಯುಕ್ತ ಗುರುವಾರ ಬುಲಿಯನ್ ಮಾರುಕಟ್ಟೆಗಳು ಮುಚ್ಚಿದ್ದವು. ಶುಕ್ರವಾರ ವಹಿವಾಟು ಆರಂಭವಾದಾಗ 99.5 ರಷ್ಟು ಶುದ್ಧಚಿನ್ನದ ಬೆಲೆಯಲ್ಲಿ 6,250 ರೂ.ಗಳಿಗೆ ಏರಿಕೆಯಾಯಿತು. ಗುರುವಾರ ಚಿನ್ನದ ಬೆಲೆ 10 ಗ್ರಾಂಗೆ 89,750 ರೂ.ಗಳಿಗೆ ಇಳಿಕೆ ಆಗಿತ್ತು. ಇದನ್ನೂ ಓದಿ: ಅಮೆರಿಕದ ಸರಕುಗಳ ಮೇಲಿನ ಟ್ಯಾರಿಫ್ 84%ಗೆ ಹೆಚ್ಚಿಸಿದ ಚೀನಾ
ಬೆಳ್ಳಿ ಬೆಲೆಯೂ ಜಿಗಿತ
ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಟ್ರೆಂಡ್‌ಗೆ ಅನುಗುಣವಾಗಿ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 2,300 ರೂ.ಗಳಿಗೆ ಏರಿಕೆಯಾಗಿ 95,500 ರೂ. ತಲುಪಿದೆ. ಅದಕ್ಕಿಂತ ಮುಂಚಿನ ವಹಿವಾಟಿನಲ್ಲಿ ಬೆಳ್ಳಿ ದರ 93,200 ರೂ. ಇತ್ತು. ಇದನ್ನೂ ಓದಿ: 75 ದೇಶಗಳಿಗೆ 90 ದಿನ ಬ್ರೇಕ್ – ಚೀನಾಗೆ 125% ಟ್ಯಾಕ್ಸ್ ಸಮರ