– ಎಷ್ಟು ಪರ್ಸೆಂಟ್ ತಗೋಂಡಿದ್ದಾರೆ ಹೇಳ್ಬೇಕು
ಹಾಸನ: ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ವರ್ಗಾವಣೆ ದಂಧೆ ನಡೆಸುತ್ತಿದ್ದು, ವರ್ಗಾವಣೆಗೆ ಎಷ್ಟು ಪರ್ಸೆಂಟ್ ಹಣ ಪಡೆದಿದ್ದೀರಿ ಎಂದು ತಿಳಿಸಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಬಂದು ಆರು ತಿಂಗಳೂ ಆಗಿರಲಿಲ್ಲ. ಆಗಲೇ ಮಹಿಳಾ ಅಧಿಕಾರಿಯನ್ನು ಬೆಂಗಳೂರಿನಿಂದ ಜಮಖಂಡಿಗೆ ವರ್ಗಾವಣೆ ಮಾಡಲಾಗಿದ್ದು, ಇದಕ್ಕಾಗಿ ಎಷ್ಟು ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ ಸ್ಪಷ್ಟಪಡಿಸಲಿ. ಮಹಿಳಾ ಅಧಿಕಾರಿಗೆ ಕಿರುಕುಳ ಕೊಟ್ಟಿದ್ದಾರೆ. ಪಿಡಬ್ಲ್ಯೂಡಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಹಿಂದೆ ಟೆನ್ ಪರ್ಸೆಂಟ್ ಸರ್ಕಾರ ಎನ್ನುತ್ತಿದ್ದ ಮೋದಿಯವರು, ಇದೀಗ ಟೆನ್ ಅಥವಾ ಎಷ್ಟು ಪರ್ಸೆಂಟಾದರೂ ಮಾಡಿಸಲಿ. ವರ್ಗಾವಣೆ ದಂಧೆ ಮಾಡಿ ನಂತರ ನೆರೆ ಹಾನಿಗೆ ದುಡ್ಡು ಬಿಡುಗಡೆ ಮಾಡುತ್ತಾರೆ ಅನ್ನಿಸುತ್ತದೆ ಎಂದು ಹರಿಹಾಯ್ದಿದ್ದಾರೆ.
Advertisement
Advertisement
ನಮ್ಮ ಜಿಲ್ಲೆಯಲ್ಲೂ ನೆರೆಯಿಂದ ಹಾನಿಯಾಗಿದೆ. ಆದರೆ, ಈವರೆಗೆ ಬಿಡಿಗಾಸು ಬಂದಿಲ್ಲ. ಹಾಸನ ಜಿಲ್ಲೆ ಅಂದರೆ ಇವರಿಗೆ ಒಂತರಾ ಅನ್ನಿಸುತ್ತದೆ. ಬೆಳೆಗಳು ನಷ್ಟವಾಗಿದ್ದರೂ ಯಾರೂ ಏನೂ ಕೇಳುತಿಲ್ಲ. ರೈತರು ನೊಂದಿರುವ ಕುರಿತು ನನಗೀಗ ಚಿಂತೆ ಶುರುವಾಗಿದೆ. ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
Advertisement
ದೇವೇಗೌಡರನ್ನು ಸೋಲಿಸಿದ್ದು ಯಾರು ಎಂದು ಇಡೀ ದೇಶಕ್ಕೆ ಗೊತ್ತಿದೆ. ಹಾಸನ ಜಿಲ್ಲೆಯಲ್ಲಿ ಏನು ನಡೆದಿದೆ ಎನ್ನುವುದೂ ಗೊತ್ತಿದೆ. ಹಾಸನದಲ್ಲಿ ಹವಾಯಿ ಚಪ್ಪಲಿ ಹಾಕಿಕೊಂಡು ಓಡಾಡುತ್ತಾರೆ. ಬೆಂಗಳೂರಲ್ಲಿ ಸೂಟು ಬೂಟು ಹಾಕ್ಕೊಂಡು ಓಡಾಡುತ್ತಾರೆ. ದೇವೇಗೌಡರು, ಕುಮಾರಸ್ವಾಮಿಗೆ ಇದೆಲ್ಲ ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.