ತಾರಕಾಸುರ: ಮಂಗಳಮುಖಿಯರ ಕಥೆ ಹೇಳಿದ್ದವರ ಕಡೆಯಿಂದ ಬುಡ್ ಬುಡ್ಕೆ ಸದ್ದು!

Public TV
3 Min Read
TARAKASURA CHANDRASHEKHAR BANDIYAPPA

ಶ್ರೀಮುರುಳಿ ಅಭಿನಯದ ರಥಾವರ ಚಿತ್ರದಲ್ಲಿ ಮಂಗಳಮುಖಿಯರ ನಿಗೂಢ ಜಗತ್ತಿಗೆ ಕಣ್ಣಾಗಿದ್ದವರು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ರಥಾವರ ಚಿತ್ರ ಅಷ್ಟು ದೊಡ್ಡ ಮಟ್ಟದಲ್ಲಿ ಯಶ ಕಂಡಿದ್ದರ ಹಿಂದೆ ಈ ವಿಶೇಷವಾದ ಕಥೆಯ ಪಾತ್ರವೂ ಪ್ರಮುಖವಾದದ್ದು. ಹಾಗಿರೋವಾಗ ಬಂಡಿಯಪ್ಪ ಅವರೇ ನಿರ್ದೇಶನ ಮಾಡಿರುವ ತಾರಕಾಸುರ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಕೊಳ್ಳದಿರಲು ಸಾಧ್ಯವೇ?

bandiyappa2

ತಾರಕಾಸುರ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತಲ್ಲಾ? ಅದರ ಮೂಲಕವೇ ಈ ಚಿತ್ರದೆಡೆಗಿನ ಕ್ರೇಜ್ ಮತ್ತಷ್ಟು ಹೆಚ್ಚಿಕೊಂಡಿದೆ. ತುಳಿತಕ್ಕೊಳಗಾಗಿ, ಅವಸಾನದ ಅಂಚಿನಲ್ಲಿರೋ ಬುಡ್ ಬುಡಿಕೆ ಸಮುದಾಯದ ಸೂಕ್ಷ್ಮವಾದ ಕಥಾನಕವನ್ನು ಚಂದ್ರಶೇಖರ್ ಬಂಡಿಯಪ್ಪ ಈ ಚಿತ್ರಕ್ಕಾಗಿ ಆರಿಸಿಕೊಂಡಿರೋ ವಿಚಾರವೂ ಇದೀಗ ಬಯಲಾಗಿದೆ. ನರಸಿಂಹಲು ನಿರ್ಮಾಣ ಮಾಡಿರುವ, ಅವರ ಪುತ್ರ ವೈಭವ್ ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ ಮಾನ್ವಿತಾ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಚಿತ್ರದಲ್ಲಿಯೇ ಮೂರು ಶೇಡುಗಳಲ್ಲಿ ನಟಿಸಿರೋ ವೈಭವ್ ಕೂಡಾ ಎಲ್ಲರ ಗಮನ ಸೆಳೆದಿದ್ದಾರೆ.

ಈ ಹಿಂದೆ ರಥಾವರ ಚಿತ್ರ ನಿರ್ದೇಶನ ಮಾಡಿದ್ದಾಗ, ಈಗ ತಾರಕಾಸುರ ಚಿತ್ರದ ಮೂಲಕ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿಜಕ್ಕೂ ಬೆರಗು ಮೂಡಿಸಿದ್ದಾರೆ. ನಮ್ಮ ನಡುವಿದ್ದೂ ಗಮನಕ್ಕೆ ಬಾರದ ಇಂಥಾ ಸೂಕ್ಷ್ಮವಾದ ಕಥಾ ಹಂದರವನ್ನು ಅವರು ಹೇಗೆ ಗ್ರಹಿಸುತ್ತಾರೆಂಬ ಅಚ್ಚರಿ ಎಲ್ಲರಲ್ಲಿಯೂ ಇದ್ದೇ ಇದೆ. ಇದೇ ಪ್ರಶ್ನೆಯೊಂದಿಗೆ ಪಬ್ಲಿಕ್ ಟಿವಿ ಅವರನ್ನು ಮುಖಾಮುಖಿಯಾದಾಗ ನಿಜಕ್ಕೂ ರೋಚಕವೆನ್ನಿಸೋ ಹಲವಾರು ವಿಚಾರಗಳನ್ನವರು ಹಂಚಿಕೊಂಡಿದ್ದಾರೆ.

bandiyappa3

ಇಂಥಾ ವಿರಳ ಕಥಾನಕಗಳಿಗೆ ಕಣ್ಣಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಚಂದ್ರಶೇಖರ್ ಬಂಡಿಯಪ್ಪ ಬಳಿಯಿರುವ ಉತ್ತರ `ಕುತೂಹಲ’. ರಥಾವರ ಚಿತ್ರದಲ್ಲಿ ಮಂಗಳಮುಖಿಯರ ಜಗತ್ತಿಗೆ ಹಣಕಿ ಹಾಕೋ ಪ್ರಯತ್ನ ಮಾಡುವಂತೆ ಪ್ರೇರೇಪಿಸಿದ್ದೂ ಕೂಡಾ ಆ ಕುತೂಹಲವೇ ಎಂಬುದು ವಿಶೇಷ. ಮಂಡ್ಯ ಸೀಮೆಯ ರೈತಾಪಿ ಬದುಕಿನ ಘಮಲನ್ನೇ ಹೊದ್ದುಕೊಂಡು ಸಿನಿಮಾ ಕನಸನ್ನು ಎದೆಯೊಳಗಿಟ್ಟುಕೊಂಡು ಬೆಂಗಳೂರಿಗೆ ಬಂದಿಳಿದ ಅವರ ಪಾಲಿಗೆ ಈ ನಗರಿಯೇ ಒಂದು ಕೌತುಕ. ನಂತರ ಹೇಗೋ ಮಾಡಿ ನಿರ್ದೇಶಕ ಎಸ್ ನಾರಾಯಣ್ ಅವರ ಬಳಿ ಸೇರಿಕೊಂಡ ನಂತರ ಅವರ ಪಾಲಿಗೆ ಸಿನಿಮಾ ಪಾಠಗಳು ತೆರೆದುಕೊಳ್ಳಲಾರಂಭಿಸಿದ್ದವು. ಆ ಕಾಲಕ್ಕೆ ಬಸವೇಶ್ವರ ನಗರದಲ್ಲಿದ್ದ ಎಸ್ ನಾರಾಯಣ್ ಮನೆಯಲ್ಲಿ ಸಿನಿಮಾ ಕೆಲಸ ಮಾಡುತ್ತಿದ್ದ ಬಂಡಿಯಪ್ಪ ಬಿಡುವಿನ ವೇಳೆಯಲ್ಲಿ ಕಾಲ ಕಳೆಯುತ್ತಿದ್ದದ್ದು ಕುರುಬರಳ್ಳಿಯ ಅಡ್ಡೆಯೊಂದರಲ್ಲಿ.

RATHAVARA

ಹಾಗೇ ಒಂದು ದಿನ ಗೆಳೆಯರ ಜೊತೆ ಬೇಕರಿಯೊಂದರ ಮುಂದೆ ಮಾತಾಡುತ್ತಿರುವಾಗ ಹೆಣವೊಂದರ ಅಂತಿಮ ಯಾತ್ರೆ ಹಾದು ಹೋಗಿತ್ತು. ಅದರ ಹಿಂದೆ ಮಂಗಳಮುಖಿಯರ ದಂಡೂ ಹೊರಟಿತ್ತು. ಅದು ವಿರಳ ಸನ್ನಿವೇಶ. ಹಾಗೆ ತೆಗೆದುಕೊಂಡು ಹೋಗುತ್ತಿದ್ದ ಹೆಣದ ಮುಖ ಮುಚ್ಚಲಾಗಿತ್ತು. ಅದ್ಯಾಕೆ ಎಂಬ ಕುತೂಹಲದಿಂದ ಚಂದ್ರಶೇಖರ್ ಮಾತಾಡಿದಾಗ ಗೆಳೆಯರೊಬ್ಬರು `ಮಂಗಳಮುಖಿಯರು ಸತ್ತಾಗ ಹೆಣದ ಮುಖ ಯಾರಿಗೂ ತೋರಿಸಲ್ಲ’ ಅಂತ ಉತ್ತರ ಬಂದಿತ್ತು. ಯಾಕ ತೋರಿಸೋದಿಲ್ಲ ಎಂಬ ಕುತೂಹಲ ಹುಟ್ಟಿಕೊಂಡಿದ್ದೇ ಅವರನ್ನು ಮಂಗಳಮುಖಿಯರ ಜಗತ್ತಿನ ಬೆಂಬೀಳುವಂತೆ ಮಾಡಿತ್ತು.

ಆ ಬಳಿಕ ಆ ಏರಿಯಾದಲ್ಲಿದ್ದ ಕೆಲ ಮಂಗಳಮುಖಿಯರ ಪರಿಚಯ ಮಾಡಿಕೊಂಡಿದ್ದ ಚಂದ್ರಶೇಖರ್, ಅವರ ಸ್ನೇಹ ಸಂಪಾದಿಸಿ ಒಂದಷ್ಟು ವಿವರ ಕಲೆ ಹಾಕಿದ್ದರು. ಇದಕ್ಕಾಗಿ ಹಿಡಿದದ್ದು ಭರ್ತಿ ಒಂದು ವರ್ಷ. ಹಾಗೆ ಕೆಲ ವಿವರ ಕಲೆ ಹಾಕಿದ ಬಂಡಿಯಪ್ಪ ಆ ಕ್ಷಣವೇ ಕಥೆಯೊಂದನ್ನು ಹೆಣೆದಿದ್ದರು. ಹಾಗೆ ಹುಟ್ಟು ಪಡೆದದ್ದು ರಥಾವರ ಚಿತ್ರ!

TARAKASURA

ಚಂದ್ರಶೇಖರ ಬಂಡಿಯಪ್ಪನವರಿಗೆ ಓದೆಂದರೆ ಬದುಕಿನ ಭಾಗ. ಪೂರ್ಣಚಂದ್ರ ತೇಜಸ್ವಿ ಮತ್ತು ಎಸ್ ಎಲ್ ಬೈರಪ್ಪ ಅವರ ಇಷ್ಟದ ಬರಹಗಾರರು. ಏನು ಸಿಕ್ಕರೂ ಓದೋ ಗೀಳು ಹೊಂದಿರೋ ಅವರಿಗೆ ಅದುವೇ ಶಕ್ತಿ. ಹೀಗೆ ಓದಿನ ಗೀಳಿನಿಂದಲೇ ತಾರಕಾಸುರನ ಕಥೆ ಹುಟ್ಟಿಕೊಂಡಿದ್ದೂ ವಿಶೇಷವೇ. ಯಾವುದೋ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನದ ತುಣುಕೊಂದು ಅವರನ್ನು ಬುಡ್ ಬುಡ್ಕೆ ಸಮುದಾಯದ ಬಗ್ಗೆ ಅಧ್ಯಯನ ನಡೆಸಲು ಪ್ರೇರೇಪಿಸಿತ್ತಂತೆ. ಅದರ ಫಲವಾಗಿಯೇ ತಾರಕಾಸುರ ಚಿತ್ರ ಹುಟ್ಟಿಕೊಂಡಿದೆ.

ಒಂದು ಕಲಾತ್ಮಕ ಚಿತ್ರವಾಗಬಲ್ಲ ಕಥೆಗೆ ಪಕ್ಕಾ ಕಮರ್ಷಿಯಲ್ ಫ್ರೇಮು ಹಾಕೋದರಲ್ಲಿ ಬಂಡಿಯಪ್ಪ ನಿಸ್ಸೀಮರು. ಅದು ರಥಾವರ ಚಿತ್ರದಲ್ಲಿಯೇ ಸಾಬೀತಾಗಿತ್ತು. ತಾರಕಾಸುರ ಚಿತ್ರವನ್ನೂ ಕೂಡಾ ಅವರು ಅಂಥಾದ್ದೇ ಆವೇಗದೊಂದಿಗೆ ರೂಪಿಸಿದ್ದಾರೆ. ಅದು ಟ್ರೈಲರ್ ಮೂಲಕವೇ ಪ್ರೇಕ್ಷಕರಿಗೂ ಅರ್ಥವಾಗಿದೆ. ಈ ಮೂಲಕವೇ ಎಲ್ಲೆಡೆ ತಾರಕಾಸುರನ ಅಬ್ಬರವೂ ಶುರುವಾಗಿದೆ. ರಥಾವರದ ನಂತರ ಈ ಮೂಲಕ ಮತ್ತೊಂದು ಮಹಾ ಗೆಲುವಿನ ನಿರೀಕ್ಷೆ ಚಂದ್ರಶೇಖರ್ ಬಂಡಿಯಪ್ಪನವರಿಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *