ಬೆಂಗಳೂರು: ಕೊಡಗಿನಲ್ಲಿ ವರುಣನ ಆರ್ಭಟದಿಂದ ತತ್ತರಿಸಿರುವ ಸಂತ್ರಸ್ತರಿಗೆ ಜನರು ಅಪಾರ ಪ್ರಾಮಾಣದ ಸಾಮಾಗ್ರಿಗಳನ್ನು ನೀಡುತ್ತಿದ್ದಾರೆ. ಆದರೆ ಈಗ ತಮಿಳುನಾಡಿನಿಂದ ಯುವಕರ ತಂಡವೊಂದು ಔಷಧಿಗಳನ್ನು ನೀಡಿದ್ದಾರೆ.
ತಮಿಳುನಾಡಿನಿಂದ ಯುವಕರ ತಂಡವೊಂಡು ಪಬ್ಲಿಕ್ ಟಿವಿ ಕಚೇರಿಯನ್ನು ಹುಡುಕಿಕೊಂಡು ಬಂದು ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಪರಿಹಾರ ಕೇಂದ್ರಗಳಿಗೆ ತೆರಳಿ ಸುಮಾರು 2 ಲಕ್ಷ ರೂ. ಮೌಲ್ಯದ ಔಷಧಿಗಳನ್ನ ನೀಡಿದ್ದಾರೆ. ಕೊಡಗಿನ ಸಂತ್ರಸ್ತರಿಗೆ ಈಗಾಗಲೇ ಅಪಾರ ಪ್ರಮಾಣದ ತಿಂಡಿ, ತಿನಿಸುಗಳು, ಬಟ್ಟೆ, ಹೊದಿಕೆ ಸೇರಿದಂತೆ ದಾಸ್ತಾನು ಸಾಮಾಗ್ರಿಗಳನ್ನು ತಲುಪಿಸಲಾಗಿದೆ.
ಸದ್ಯಕ್ಕೆ ಅವರಿಗೆ ಔಷಧಿಗಳು ಮತ್ತು ಮನೆ ಕಟ್ಟಿಕೊಳ್ಳಲು ಆರ್ಥಿಕ ಸಹಾಯ ಬೇಕಾಗಿದೆ. ಈ ಬಗ್ಗೆ ತಿಳಿದುಕೊಂಡ ತಮಿಳುನಾಡಿನ ಯುವಕರು ಸ್ವತಃ ಅವರೇ 2 ಲಕ್ಷ ರೂ.ವರೆಗೂ ಬೇಕಾಗುವಂತಹ ಔಷಧಿಗಳನ್ನು ಕಾರಿನಲ್ಲಿ ತುಂಬಿಕೊಂಡು ಬಂದು ಪರಿಹಾರ ಕೇಂದ್ರಗಳಿಗೆ ನೀಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯುವಕರು, ಇದರಲ್ಲಿ ನೋವಿಗೆ, ಕೆಮ್ಮಿಗೆ ಬೇಕಾಗುವಂತಹ ಔಷಧಿಗಳು, ಆ್ಯಂಟಿ ಬಯೋಟಿಕ್, ಮಕ್ಕಳಿಗೆ ಬೇಕಾಗುವ ಔಷಧಿಗಳು, ಅಲರ್ಜಿಗೆ ಎಲ್ಲ ರೀತಿಯ ಔಷಧಿಗಳನ್ನು ತಂದಿದ್ದೇವೆ. ಹಣ್ಣು, ಬ್ರೆಡ್, ಬಟ್ಟೆ ಎಲ್ಲವನ್ನು ತಂದು ಕೊಡುತ್ತೇವೆ. ನಾವು ಯಾವಾಗಲೂ ಪ್ರವಾಸಕ್ಕಾಗಿ ಕೊಡಗಿಗೆ ಬರುತ್ತಿದ್ದೆವು. ಇದು ನಂಬರ್ 1 ಪ್ರವಾಸಿ ತಾಣವಾಗಿದೆ. ಅಂತಹ ಕೊಡಗಿಗೆ ಈ ರೀತಿ ಪ್ರವಾಹವುಂಟಾಗಿ ಹಾನಿಯಾಗಿರುವುದು ತುಂಬ ಬೇಸರವಾಗಿದೆ. ಇಲ್ಲಿನ ಜನರಿಗೆ ಒಳ್ಳೆಯದಾಗಬೇಕು ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv