ಚೆನ್ನೈ: ಮೇಲ್ವರ್ಗದ ಸಮುದಾಯದವರು ತಮ್ಮ ಜಮೀನಿನಲ್ಲಿ ಶವವನ್ನು ತೆಗೆದುಕೊಂಡು ಹೋಗಲು ದಾರಿ ನೀಡದ ಕಾರಣ ದಲಿತರು ಸೇತುವೆ ಮೇಲಿನಿಂದ ಹಗ್ಗ ಕಟ್ಟಿ ಶವ ಇಳಿಸಿದ್ದಾರೆ. ಈ ಅಮಾನವೀಯ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ವನಿಯಂಬಾಡಿ ತಾಲೂಕಿನಲ್ಲಿ ನಡೆದಿದೆ.
46 ವರ್ಷದ ಎಸ್.ಕುಪ್ಪಂ ಎಂಬ ವ್ಯಕ್ತಿ ಸಾವನ್ನಪ್ಪಿದ್ದರು. ಅಂತ್ಯಕ್ರಿಯೆಯಾಗಿ ಶವವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಮೇಲ್ಜಾತಿಯ ಕೆಲವರು ತಮ್ಮ ಜಮೀನಿನಲ್ಲಿ ಶವವನ್ನು ತೆಗೆದುಕೊಂಡು ಹೋಗದಂತೆ ತಡೆದಿದ್ದಾರೆ. ಕೊನೆಗೆ ಕುಟುಂಬಸ್ಥರು ಸೇತುವೆ ಮೇಲಿಂದ ಶವವನ್ನು ಕೆಳಗೆ ಇಳಿಸಿದ್ದಾರೆ.
Advertisement
Advertisement
ಈ ಗ್ರಾಮದಲ್ಲಿ ದಲಿತರಿಗೆ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ಇರುವುದು ಒಂದೇ ಸ್ಮಶಾನ. ಶವವನ್ನು ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೇಲ್ವರ್ಗದವರ ಕೃಷಿ ಜಮೀನನ್ನು ದಾಟಿಕೊಂಡು ಹೋಗಬೇಕು. ಮೇಲ್ವರ್ಗದ ಜನರು ತಮ್ಮ ಜಮೀನಿನಲ್ಲಿ ಶವ ತೆಗೆದುಕೊಂಡು ಹೋಗಲು ಅಡ್ಡಿಪಡಿಸುತ್ತಾರೆ. ಹೀಗಾಗಿ ಚಟ್ಟಕ್ಕೆ ಎರಡು ಕಡೆ ಹಗ್ಗ ಕಟ್ಟಿ ಕೆಲವರು ಮೇಲಿನಿಂದ ಇಳಿಸುತ್ತಾರೆ. ಕೆಳಗೆ ಕೆಲವರು ಶವವನ್ನು ಇಳಿಸಿಕೊಳ್ಳುತ್ತಾರೆ.
Advertisement
Advertisement
ಶವವನ್ನು ಸೇತುವೆ ಮೇಲಿಂದ ಕೆಳಗಿಳಿಸುವ ದೃಶ್ಯಗಳನ್ನು ಕೆಲವರು ಮೊಬೈಲಿನಲ್ಲಿ ಸೆರೆಹಿಡಿದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು, ಈ ರೀತಿಯ ಘಟನೆ ನಡೆದಿದೆಯೇ ಎಂದು ತನಿಖೆ ನಡೆಸಲಾಗುವುದು. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.