ಚೆನ್ನೈ : ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಡ್ಯಾಂಗಳು ಭರ್ತಿಯಾಗಿದೆ. ಮಂಡ್ಯದ ಕೆಆರ್‌ಎಸ್ ಜಲಾಶಯದಿಂದ (KRS Dam) ಭಾರೀ ಪ್ರಮಾಣದ ನೀರನ್ನು ಹೊರ ಬಿಟ್ಟ ಪರಿಣಾಮ ಮೆಟ್ಟೂರು ಜಲಾಶಯ (Mettur Dam) ಬಹುತೇಕ ಭರ್ತಿಯಾಗಿದೆ.
ಜಲಾಶಯ ಭರ್ತಿಯಾಗುತ್ತಿದ್ದಂತೆ ತಮಿಳುನಾಡು ಸರ್ಕಾರ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವಂತೆ ಭಾನುವಾರ ಆದೇಶಿಸಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ದುರೈಮುರುಗನ್ ಹಾಗೂ ಇತರರು ಪರಿಸ್ಥಿತಿಯನ್ನು ಅವಲೋಕಿಸಿ ನೀರು ಬಿಡುವಂತೆ ಸೂಚಿಸಲಾಯಿತು.
Advertisement
120 ಅಡಿ ಎತ್ತರದ ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟ 109.20 ಅಡಿಗೆ ಏರಿದ್ದು, ಅಣೆಕಟ್ಟು ತುಂಬಲು ಕೇವಲ 11 ಅಡಿಗಳಷ್ಟೇ ಬಾಕಿ ಇದೆ. ಆದ್ದರಿಂದ ಮೆಟ್ಟೂರು ಜಲಾಶಯದಿಂದ ತಕ್ಷಣವೇ ನೀರನ್ನು ಹರಿಬಿಡಲು ಸೂಚಿಸಲಾಗಿದೆ.
Advertisement
ಕೆಆರ್‌ಎಸ್ ಜಲಾಶಯದಿಂದ ಜುಲೈ 20 ರಂದು 10 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗಿತ್ತು. ದಿನ ದಿನೇ ಒಳಹರಿವು ಹೆಚ್ಚಾಗುತ್ತಿದ್ದಂತೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿತ್ತು. ಶನಿವಾರ 1.50 ಲಕ್ಷ ಕ್ಯುಸೆಕ್ ನೀರನ್ನು ಹೊರ ಬಿಡಲಾಗಿತ್ತು. ಇದನ್ನೂ ಓದಿ: ಕನ್ನಡಿಗರ ಜೀವನಾಡಿ ಕಾವೇರಿಗೆ ಇಂದು ಸಿಎಂ ಬಾಗಿನ
Advertisement
ಕರ್ನಾಟಕದಿಂದ ಎಷ್ಟು ನೀರು ಹೋಗಿದೆ?
2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಪ್ರತಿ ವರ್ಷ 177.250 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಸಬೇಕು. ಇದರ ಅನ್ವಯ ಪ್ರತಿ ತಿಂಗಳು ಇಂತಿಷ್ಟು ಪ್ರಮಾಣದ ನೀರನ್ನು ಕರ್ನಾಟಕ ಬಿಡಬೇಕಾಗುತ್ತದೆ.
Advertisement
ಜೂನ್ ತಿಂಗಳಿನಲ್ಲಿ 9.19 ಟಿಎಂಸಿ ನೀರನ್ನು ಸರ್ಕಾರ ಬಿಡಬೇಕಿತ್ತು. ಆದರೆ ಸರ್ಕಾರ 2.252 ಟಿಎಂಸಿ ನೀರು ಮಾತ್ರ ಬಿಡುಗಡೆ ಮಾಡಿತ್ತು. ಜೂನ್ ತಿಂಗಳಿನಲ್ಲಿ ಕಡಿಮೆ ಪ್ರಮಾಣದ ನೀರು ಬಿಡುಗಡೆ ಮಾಡಿದ್ದಕ್ಕೆ ತಮಿಳುನಾಡು ಕ್ಯಾತೆ ತೆಗೆದಿತ್ತು.
ಜುಲೈ 28ರ ವೇಳೆಗೆ ಕರ್ನಾಟಕ 28.21 ಟಿಎಂಸಿ ನೀರನ್ನು ಹರಿಸಬೇಕಿತ್ತು. ಆದರೆ ಕರ್ನಾಟಕ 67.748 ಟಿಎಂಸಿ ನೀರನ್ನು ಹರಿಸಿದೆ. ಎರಡು ತಿಂಗಳಿನಲ್ಲಿ 37.40 ಟಿಎಂಸಿ ನೀರು ಹರಿಸಬೇಕಿದ್ದ ಕರ್ನಾಟಕ ಒಟ್ಟು 70 ಟಿಎಂಸಿ ನೀರನ್ನು ಹರಿಸಿದೆ.
ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8 ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನ ಅಧಿಕಾರಿಗಳು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಬೇಕಾಗುತ್ತದೆ.
ಕ್ಯುಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯುಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯುಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯುಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.