ಚೆನ್ನೈ: ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿರುವ ಚೀನಾದ ಟಿಕ್ ಟಾಕ್ ಅಪ್ಲಿಕೇಶನ್ ಅನ್ನು ಬ್ಯಾನ್ ಮಾಡಲು ತಮಿಳುನಾಡು ಸರ್ಕಾರ ಚಿಂತನೆ ನಡೆಸುತ್ತಿದೆ.
ಮಂಗಳವಾರ ನಡೆದ ರಾಜ್ಯದ ವಿಧಾನಸಭಾ ಅಧಿವೇಶನದಲ್ಲಿ ನಾಗಪಟ್ಟಣದ ಶಾಸಕ ತಮೀಮ್ ಅನ್ಸಾರಿ ಈ ಅಪ್ಲಿಕೇಶನ್ ಅನ್ನು ನಿಷೇಧ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಈ ಅಪ್ಲಿಕೇಶನ್ ನಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದು ಸದನಕ್ಕೆ ತಿಳಿಸಿದರು.
ಈ ಮನವಿ ಸಂಬಂಧ ಮಾಹಿತಿ ತಂತ್ರಜ್ಞಾನ ಸಚಿವ ಎಂ. ಮಣಿಕಂಠನ್ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಹೇಗೆ ಬ್ಲೂ ವೇಲ್ ಮಕ್ಕಳನ್ನು ಹಾಳು ಮಾಡುತ್ತಿದೆಯೋ ಅದೇ ರೀತಿ ಟಿಕ್ ಟಾಕ್‍ನಿಂದ ಯುವ ಜನತೆ ಹಾಳಾಗುತ್ತಿದ್ದಾರೆ. ತಮಿಳುನಾಡಿನ ಸಂಸ್ಕೃತಿ ಇದರಿಂದಾಗಿ ಹಾಳಾಗುತ್ತಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಟಿಕ್ ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡುವವರೇ ಎಚ್ಚರ
ಟಿಕ್ ಟಾಕ್ ಆ್ಯಪ್ ಭಾರತದಲ್ಲಿ 16ರಿಂದ 24 ವಯಸ್ಸಿನವರು ಹೆಚ್ಚಾಗಿ ಬಳಸುತ್ತಾರೆ. ಜನವರಿ ತಿಂಗಳಿನಲ್ಲಿ ವಿರುದುನಗರದ ಜಿಲ್ಲೆಯಲ್ಲಿ ನಾಲ್ಕು ಜನರು ತಮಾಷೆಗಾಗಿ ಪೊಲೀಸ್ ಠಾಣೆಯಲ್ಲೇ ಪೊಲೀಸರ ಟಿಕ್ ಟಾಕ್ ವಿಡಿಯೋವನ್ನು ಮಾಡಿದ್ದರು. ಆಗ ಪೊಲೀಸರು ನಾಲ್ವರನ್ನು ಬಂಧಿಸಿದ್ದರು.
ಕೆಲ ದಿನಗಳ ಹಿಂದೆ ಹುಡುಗಿಯರ ಟಿಕ್ ಟಾಕ್ ವಿಡಿಯೋವನ್ನು ಡೌನ್ ಲೋಡ್ ಮಾಡಿ ಅದನ್ನು ತಿರುಚಿ ಮಾಂಸದಂಧೆಗೆ ಗ್ರಾಹಕರನ್ನು ಸೆಳೆಯುತ್ತಿದ್ದ ಜಾಲವನ್ನು ತಮಿಳುನಾಡು ಪೊಲೀಸರು ಬೇಧಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv