– ಅಗೆದಷ್ಟು ಸಿಕ್ತು ನಗದು, ದಾಖಲೆ
ಚೆನ್ನೈ: ತಮಿಳುನಾಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರತಿಷ್ಠಿತ ಆಭರಣ ಮಳಿಗೆಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ಚಿನ್ನ, ವಜ್ರ ಸೇರಿದಂತೆ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಚೆನ್ನೈ ಹಾಗೂ ಕೊಯಮತ್ತೂರಿಲ್ಲಿ ಶರವಣ ಗ್ರೂಪ್ ಮಳಿಗೆಗಳು ಮತ್ತು ರಿಯಾಲ್ಟಿ ಕಂಪನಿಗಳಾದ ಲೋಟಸ್ ಗ್ರೂಪ್ ಹಾಗೂ ಜಿಸ್ಕ್ವೇರ್ ಗಳ ಮಳಿಗೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಒಂದು ವಾರಕ್ಕೂ ಹೆಚ್ಚು ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ಸ್ಥಳಗಳಲ್ಲಿ ಬಚ್ಚಿಟ್ಟಿದ್ದ ಅಪಾರ ಪ್ರಮಾಣದ ಸಂಪತ್ತನ್ನು ವಶಕ್ಕೆ ಪಡೆದಿದ್ದಾರೆ.
ಸಂಸ್ಥೆಗಳಿಗೆ ಸೇರಿದ ಸಂಪತ್ತನ್ನು ತಮಿಳುನಾಡಿನ ವಿವಿಧ ಪ್ರದೇಶಗಳ ಸಮಾಧಿಗಳಲ್ಲಿ ಬಚ್ಚಿಡಲಾಗಿದ್ದು, ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ಸುಮಾರು 433 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸೀಜ್ ಮಾಡಿದ್ದಾರೆ. ಅಲ್ಲದೇ ಸ್ಮಶಾನದಲ್ಲಿ ಅಗೆದು ಅವುಗಳಲ್ಲಿ ಬಚ್ಚಿಟ್ಟಿದ್ದ ನಗದು, ದಾಖಲೆಗಳು, ಚಿನ್ನ ಹಾಗೂ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ಒಟ್ಟಾರೆ 25 ಕೋಟಿ ರೂ. ನಗದು ಹಣ, 12 ಕೆ.ಜಿ ಚಿನ್ನ ಮತ್ತು 626 ಕ್ಯಾರೆಟ್ ವಜ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಶರವಣ ಸ್ಟೋರ್ಸ್ ಮಾಲೀಕ ಯೋಗರತ್ನಂ ಪಾಂಡುರಾಯ್, ಅವರ ಸಹವರ್ತಿ ಹಾಗೂ ಲೋಟಸ್ ಮತ್ತು ಜಿಸ್ಕ್ವೇರ್ ಗ್ರೂಪ್‍ಗಳ ಮಾಲೀಕ ರಾಮಜಯಂ ಅಲಿಯಾಸ್ ಬಾಲ ಮತ್ತು ಅವರ ಸಹವರ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv