– ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್‌ಗೆ ಸೂಚನೆ
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಲ್ಲಿ (Tamil Nadu) ಧಾರಾಕಾರ (Rain) ಮಳೆಯಾಗುತ್ತಿದೆ. ಮಳೆಯ ಪರಿಣಾಮ ಚೆನ್ನೈ (Chennai) ಸೇರಿದಂತೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು (ಮಂಗಳವಾರ) ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಜೆ ಘೋಷಿಸಿದ್ದಾರೆ.
Advertisement
ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಿಗೆ ಈ ಆದೇಶ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳ ಕಾಲ ತಮಿಳುನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನೂ ನೀಡಿದೆ. ಈ ಜಿಲ್ಲೆಗಳ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಅಕ್ಟೋಬರ್ 15 ರಿಂದ 18ರವರೆಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವ ಸಲಹೆಯನ್ನು ನೀಡುವಂತೆ ಅಧಿಕಾರಿಗಳಿಗೆ ಸ್ಟಾಲಿನ್ ಸೂಚನೆ ನೀಡಿದ್ದಾರೆ.
Advertisement
ಮಳೆಯಾಗುತ್ತಿರುವ ಭಾಗಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಹಾಯವಾಣಿ ಆರಂಭಿಸಿದೆ. ಸಹಯಾಕ್ಕಾಗಿ 1070, ಜಿಲ್ಲಾ ಸಹಾಯವಾಣಿ 1077, ವಾಟ್ಸಪ್ ಸಂಖ್ಯೆ 9445869848ಕ್ಕೆ ಸಂಪರ್ಕಿಸಲು ಕೋರಲಾಗಿದೆ.
Advertisement
Advertisement
ಅ.14ರ ರಾತ್ರಿ ತಿರುವಳ್ಳೂರಿನಲ್ಲಿ ಭಾರೀ ಮಳೆ ದಾಖಲಾಗಿದ್ದು, ಪೊನ್ನೇರಿ ರೈಲ್ವೆ ಸುರಂಗಮಾರ್ಗ ಸೇರಿದಂತೆ ನಗರದ ಹಲವು ಭಾಗಗಳು ಜಲಾವೃತವಾಗಿದೆ. ಇದರ ಬೆನ್ನಲ್ಲೇ ಸಿಎಂ ಸ್ಟಾಲಿನ್ ಅವರು ತೀವ್ರ ಮಳೆಯಿಂದ ಉಂಟಾದ ಹಾನಿಯ ಪರಿಶೀಲನೆಗೆ ತಿರುವಳ್ಳೂರಿನ ಕೆಲವು ಭಾಗಗಳಿಗೆ ಭೇಟಿ ನೀಡಿದರು. ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ರೆಡ್ ಅಲರ್ಟ್‌ನಲ್ಲಿರುವ ಚೆನ್ನೈನ ಕೆಲವು ಭಾಗಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಭಾರೀ ಮಳೆಯ ಅವಧಿಯಲ್ಲಿ ನಾಗರಿಕರ ಸಂಚಾರಕ್ಕೆ ಹೆಚ್ಚಿನ ಮೆಟ್ರೋ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಚೆನ್ನೈ ಮೆಟ್ರೋ ರೈಲು ಸೇವೆ ಘೋಷಿಸಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ತಮಿಳುನಾಡಿನ 10 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಧರ್ಮಪುರಿ, ಸೇಲಂ, ನೀಲಗಿರಿ, ಈರೋಡ್, ನಾಮಕ್ಕಲ್, ಅರಿಯಲೂರ್, ಪೆರಂಬಲೂರ್, ತಿರುಚಿರಾಪಳ್ಳಿ, ಕರೂರ್, ತಿರುಪ್ಪೂರ್, ಕೊಯಮತ್ತೂರು, ದಿಂಡಿಗಲ್, ಪುದುಕ್ಕೊಟ್ಟೈ, ನಾಗಪಟ್ಟಣಂ, ಶಿವಗಂಗೈ ಮತ್ತು ರಾಮನಾಥಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಅ.15-17ರವರೆಗೆ ತಮಿಳುನಾಡು ಕರಾವಳಿಯ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.