ಚೆನ್ನೈ: ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ತಮಿಳುನಾಡು ಮೂಲದ ಉದ್ಯಮಿಯೊಬ್ಬರು ಬರೊಬ್ಬರಿ 246 ಕೋಟಿ ರೂ. ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ.
ನಾಮಕ್ಕಳ್ ಜಿಲ್ಲೆಯ ತಿರುಚಿನ್ಗೊಡ್‍ನ ಉದ್ಯಮಿ ಇಷ್ಟೊಂದು ಮೊತ್ತದ ಹಳೆ ನೋಟುಗಳನ್ನು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿದ್ದಾರೆ. ಉದ್ಯಮಿ ಹೆಸರನ್ನು ಐಟಿ ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ಆದರೆ ಈ ಠೇವಣಿಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ(ಪಿಎಂಜಿಕೆವೈ) ಅಡಿಯಲ್ಲಿ ಶೇ.45ರಷ್ಟು ತೆರಿಗೆ ಬೀಳಲಿದೆ.
ಜಮೆ ಮಾಡಿದ ಬಳಿಕ ಉದ್ಯಮಿ ನಾಪತ್ತೆಯಾಗಿದ್ದು, 15 ದಿನಗಳ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ಪಿಎಂಜಿಕೆವೈ ಯೋಜನೆ ಬಗ್ಗೆ ತಿಳಿಸಿದ್ದಾರೆ. ಇದಾದ ಬಳಿಕ ಉದ್ಯಮಿ ಈ ಯೋಜನೆಯ ಅಡಿಯಲ್ಲಿ ಹಣವನ್ನು ಠೇವಣಿ ಇಡುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
- Advertisement3
ತಮಿಳುನಾಡು ಮತ್ತು ಪುದುಚ್ಚೇರಿಯಲ್ಲಿ 200 ಕ್ಕೂ ಹೆಚ್ಚು ವ್ಯಕ್ತಿಗಳು ಮತ್ತು ಕಂಪೆನಿಗಳು ಸುಮಾರು 600 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಿವಿಧ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
- Advertisement
ಈಗಾಗಲೇ ಬಹಳಷ್ಟು ಜನ ಪಿಎಂಜಿಕೆವೈ ಯೋಜನೆಯ ಅಡಿಯಲ್ಲಿ ಹಣವನ್ನು ಇಟ್ಟಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಹಣವನ್ನು ಇಡಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಈ ಅವಧಿಯ ಒಳಗಡೆ ಹಣವನ್ನು ಠೇವಣಿ ಇಡದಿದ್ದರೆ, ಏಪ್ರಿಲ್ 1 ರಿಂದ ದಂಡದ ಮೊತ್ತ ಏರಿಸಲಾಗುವುದು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪಿಎಂಜಿಕೆವೈ?
ಪಿಎಂಜಿಕೆವೈ ಯೋಜನೆ ಅಡಿ ಠೇವಣಿ ಇಟ್ಟ ಹಣ ಕಪ್ಪು ಹಣಗಳಿಗೆ ಶೇ. 49.9 ರಷ್ಟು ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೇ ಶೇ.25ರಷ್ಟು ಹಣವನ್ನು ಆರ್‍ಬಿಐಯಲ್ಲಿ 4 ವರ್ಷಗಳ ಕಾಲ ಠೇವಣಿ ಇಡಬೇಕಾಗುತ್ತದೆ. ಈ ರೀತಿಯಾಗಿ ಠೇವಣಿ ಇರಿಸಿದ ಹಣಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ. ಈ ಯೋಜನೆ ಹೊರತುಪಡಿಸಿ ಸಾಮಾನ್ಯ ಪ್ರಕ್ರಿಯೆ ಮೂಲಕ ತಮ್ಮ ಕಪ್ಪು ಹಣ ಘೋಷಿಸಿಕೊಂಡರೆ ಶೇ. 77.2ರಷ್ಟು ದಂಡ ಸೇರಿದಂತೆ ತೆರಿಗೆ ಕಟ್ಟಬೇಕಾಗುತ್ತದೆ.
ಇಲಾಖೆ ನಡೆಸುವ ದಾಳಿಯಲ್ಲಿ ಕಪ್ಪು ಹಣ ಸಿಕ್ಕಿ ಬಿದ್ದರೆ ಶೇ.137.25ರಷ್ಟು ದಂಡ ಹಾಗೂ ಬೇನಾಮಿ ಕಾಯ್ದೆ ಅನ್ವಯ ಏಳು ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.