ಚೆನ್ನೈ/ಆನೇಕಲ್: ಪ್ರೀತಿಗೆ (Love) ಪೋಷಕರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೇಮಿಗಳು (Lovers) ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ (Tamil Nadu) ಡೆಂಕಣಿಕೊಟ್ಟೈನ ಕೆಳಮಂಗಲ ಸಮೀಪದ ಗೌತಾಲಂ ಗ್ರಾಮದಲ್ಲಿ ನಡೆದಿದೆ.
ಗೌತಾಲಂ ಗ್ರಾಮದ ನರಸಿಂಹಮೂರ್ತಿ (22) ಮತ್ತು ಬಾಚಪ್ಪನಟ್ಟಿ ಗ್ರಾಮದ 17 ವರ್ಷದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ನರಸಿಂಹಮೂರ್ತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಪ್ರಾಪ್ತೆ ಕೃಷ್ಣಗಿರಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇವರಿಬ್ಬರು ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಪೋಷಕರ ತೀವ್ರ ವಿರೋಧವಿತ್ತು.
ನರಸಿಂಹಮೂರ್ತಿ ಯುವತಿಗೆ ಕಿರುಕುಳ ನೀಡುತ್ತಿದ್ದಾನೆಂದು ಕಳೆದ ತಿಂಗಳು ಯುವತಿ ಪೋಷಕರು ಡೆಂಕಣಿಕೊಟ್ಟೈ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನರಸಿಂಹಮೂರ್ತಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಕಳೆದ ಹತ್ತು ದಿನಗಳ ಹಿಂದೆಯಷ್ಟೇ ನರಸಿಂಹಮೂರ್ತಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಜೈಲಿನಿಂದ ಹೊರಬಂದ ಬಳಿಕ ಯುವತಿ ಜೊತೆ ನಿರಂತರವಾಗಿ ಫೋನ್ ಸಂಪರ್ಕ ಹೊಂದಿದ್ದ.
- Advertisement
- Advertisement
ಆ.24ರ ಸಂಜೆ ಕಾಲೇಜು ಮುಗಿಸಿದ ಯುವತಿಯು ನರಸಿಂಹಮೂರ್ತಿಯ ಮನೆಗೆ ಹೋಗಿದ್ದಳು. ಪ್ರೀತಿಗೆ ಯುವತಿಯ ಪೋಷಕರು ವಿರೋಧದಿಂದ ಬೇಸತ್ತು ಅವರಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಿರ್ಧಾರ ಮಾಡಿದ್ದರು. ಬಾಗಿಲು ಹಾಕಿಕೊಂಡ ಇಬ್ಬರು ಪ್ರಿಯಕರನ ಮನೆಯಲ್ಲಿಯೇ ಫ್ಯಾನಿಗೆ ನೇಣು ಬಿಗುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮನೆಯ ಬಾಗಿಲು ತೆರೆಯದೆ ಇದ್ದಾಗ ಅನುಮಾನಗೊಂಡ ಯುವಕನ ಪೋಷಕರು ಬಾಗಿಲು ಮುರಿದು ಒಳಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಡೆಂಕಣಿಕೊಟ್ಟೈ ಡಿವೈಎಸ್ಪಿ ಶಾಂತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಡೆಂಕಣಿಕೊಟ್ಟೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.