ಚಾಮರಾಜನಗರ: ದಶಕದ ಹಿಂದೆಯೇ ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧ ಮಾಡಲಾಗಿದೆ. ಆದರೆ ರಾಜ್ಯದ ಗಡಿಯಂಚಿನಲ್ಲಿರುವ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಭಾಗದಲ್ಲಿ ಕದ್ದುಮುಚ್ಚಿ ಹೊರ ರಾಜ್ಯಗಳ ಲಾಟರಿ ದಂಧೆ ನಡೆಯುತ್ತಿದೆ. ಕೂಲಿ ಕಾರ್ಮಿಕರು, ಬಡವರೇ ದಂಧೆಕೋರರ ಟಾರ್ಗೆಟ್ ಆಗಿರುವುದು ಆಂತಕಕಾರಿ ವಿಷಯವಾಗಿದೆ.
ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯದ ಏಕಮಾತ್ರ ಪಟ್ಟಣ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ. ಗುಂಡ್ಲುಪೇಟೆಯಿಂದ ಕೇರಳದ ಸುಲ್ತಾನ್ ಬತ್ತೇರಿ ಹಾಗೂ ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿವೆ. ಈ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ರಾಜ್ಯದಲ್ಲಿ ಲಾಟರಿ ನಿಷೇಧವಿದ್ದರೂ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಲಾಟರಿ ಚಾಲ್ತಿಯಲ್ಲಿದೆ.
Advertisement
Advertisement
ಕೆಲವು ದಂಧೆಕೋರರು ಕೇರಳ ಮತ್ತು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿ ಇರುವ ಲಾಟರಿಗಳನ್ನು ಗುಂಡ್ಲುಪೇಟೆ ಭಾಗಕ್ಕೆ ತಂದು ಕದ್ದು ಮಾರಾಟ ಮಾಡುತ್ತಿದ್ದಾರೆ. ಜೇಬಿನಲ್ಲಿ ಲಾಟರಿಗಳನ್ನು ತಂದು ಮಾರಾಟ ಮಾಡಿ ಹೋಗುತ್ತಾರೆ. ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ತಮ್ಮ ರಾಜ್ಯದಲ್ಲಿ ಲಾಟರಿ ಖರೀದಿಸಿ ಜೇಬಿನಲ್ಲಿ ಇಟ್ಟುಕೊಂಡಿದ್ದೇವೆ. ಕೆಲಸದ ನಿಮಿತ್ತ ಇಲ್ಲಿಗೆ ಬಂದಿದ್ದೇವೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಪ್ರತಿಕ್ರಿಯಿಸಿ, ಗುಂಡ್ಲುಪೇಟೆ ಭಾಗದಲ್ಲಿ ಸಂಜೆ ವೇಳೆ ಹೊರ ರಾಜ್ಯದ ಲಾಟರಿಗಳನ್ನು ಕದ್ದು ಮಾರಾಟ ಮಾಡುವುದು ತಿಳಿದು ಬಂದಿದೆ. ಲಾಟರಿ ಮಾರಾಟ ಮಾಡಿ ಸಿಕ್ಕಿ ಬಿದ್ದವರ ಮೇಲೆ ಈಗಾಗಲೇ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊರ ರಾಜ್ಯದ ಲಾಟರಿ ಮಾರಾಟದ ಬಗ್ಗೆ ಹದ್ದಿನ ಕಣ್ಣಿಡಲಾಗುವುದು ಎಂದು ತಿಳಿಸಿದ್ದಾರೆ.
Advertisement
ಖದೀಮರ ಬಗ್ಗೆ ಪೊಲೀಸರು ಎಷ್ಟೇ ಹದ್ದಿನ ಕಣ್ಣು ಇಟ್ಟಿದ್ದರೂ ಲಾಟರಿ ಮಾರಾಟ ದಂಧೆ ನಡೆಯುತ್ತಲೇ ಇದೆ. ಅಮಾಯಕ ಕೂಲಿ ಕಾರ್ಮಿಕರು, ಬಡವರು ಲಾಟರಿ ದಂಧೆಗೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ.