ಚೆನ್ನೈ: ಭಾರತೀಯ ಮೀನುಗಾರರೊಬ್ಬರು ಶ್ರೀಲಂಕಾ ನೌಕಾಪಡೆಯ ಗುಂಡಿನ ದಾಳಿಗೆ ಬಲಿಯಾಗಿದ್ದು, ತಮಿಳುನಾಡಿನ ರಾಮೇಶ್ವರಂನಲ್ಲಿ ಪ್ರತಿಭಟನೆ ನಡೆಯುತ್ತಿದೆ.
22 ವರ್ಷದ ಮೀನುಗಾರ ಬ್ರಿಡ್ಗೊ ಎಂಬವರು ಶ್ರೀಲಂಕಾ ನೌಕಾಪಡೆಯ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೀನುಗಾರನ ಹತ್ಯೆ ಖಂಡಿಸಿ ತಮಿಳುನಾಡಿನ ರಾಮೇಶ್ವರಂನಲ್ಲಿರುವ ಬ್ರಿಡ್ಗೋ ಅವರ ಮನೆಯಲ್ಲಿ ಕುಟುಂಬಸ್ಥರು ಸೇರಿದಂತೆ ಸಾವಿರಾರು ಜನ ಸೇರಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಶ್ರೀಲಂಕಾ ಸರ್ಕಾರ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
Advertisement
ಬ್ರಿಡ್ಗೋ ಅವರು ಕಚ್ಚತೀವು ದ್ವೀಪದ ಸಮೀಪ ಮೀನುಗಾರಿಕೆ ಮಾಡುವ ವೇಳೆ ಶ್ರೀಲಂಕಾ ನೌಕಾ ಪಡೆಯ ಸಿಬ್ಬಂದಿ ಬಂದು ಗುಂಡಿನ ದಾಳಿ ನಡೆಸಿದ್ರು ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬ್ರಿಡ್ಗೊ ಅವರ ಕುತ್ತಿಗೆಯ ಭಾಗಕ್ಕೆ ಗುಂಡು ತಗುಲಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಮೀನುಗಾರ ಶರವಣನ್ ಅವರ ಕಾಲಿಗೂ ಗುಂಡು ತಗುಲಿದ್ದು ಅವರು ಮಧ್ಯರಾತ್ರಿಯ ನಂತರ ಸಮುದ್ರತೀರಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ.
Advertisement
ಶ್ರೀಲಂಕಾ ನೌಕಾ ಪಡೆಯ ಸಿಬ್ಬಂದಿ ಗುಂಡಿನ ದಾಳಿ ನಡೆಸುವುದಕ್ಕೂ ಮುಂಚೆ ಎಚ್ಚರಿಕೆ ನೀಡಲಿಲ್ಲ. ಗುಂಡಿನ ದಾಳಿ ನಡೆದ ವೇಳೆ ಅಲ್ಲಿದ್ದ 2 ಸಾವಿರಕ್ಕೂ ಹೆಚ್ಚು ಮೀನುಗಾರರಿಗೆ ಆಘಾತವಾಯ್ತು ಎಂದು ರಾಮೇಶ್ವರಂ ಮೀನುಗಾರರ ಸಂಘದ ಅಧ್ಯಕ್ಷ ಸೇಸುರಾಜು ತಿಳಿಸಿದ್ದಾರೆ.