ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ತಮಿಳುನಾಡಿನಿಂದ ಮತ್ತೆ ಖ್ಯಾತೆ ಆರಂಭವಾಗಿದ್ದು, ರಾಜ್ಯಕ್ಕೆ 34 ಟಿಎಂಸಿ ನೀರು ಹರಿಸಬೇಕು ಎಂದು ಕಾವೇರಿ ಪ್ರಾಧಿಕಾರದ ಎದುರು ಪ್ರಸ್ತಾವನೆ ಸಲ್ಲಿಸಿದೆ.
ಸುಪ್ರೀಂಕೋರ್ಟ್ ಆದೇಶದ ಅನ್ವಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾದ ಬಳಿಕ ಇಂದು ನವದೆಹಲಿಯಲ್ಲಿ ಮೊದಲ ಸಭೆ ನಡೆಸಲಾಯಿತು. ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಮಸೂದ್ ಹುಸೇನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಮಿಳುನಾಡು ತನ್ನ ಪ್ರಸ್ತಾವನೆ ಸಲ್ಲಿಸಿದೆ. ತಿಂಗಳುವಾರು ಹಂಚಿಕೆ ಪೈಕಿ ಜುಲೈ ನಲ್ಲಿ 34 ಟಿಎಂಸಿ ನೀರನ್ನು ಕರ್ನಾಟಕ ಹರಿಸಬೇಕು, ಈ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಲು ತಮಿಳುನಾಡಿದ ಪ್ರತಿನಿಧಿ ಎಸ್.ಕೆ ಪ್ರಭಾಕರನ್ ಮನವಿ ಮಾಡಿದರು.
Advertisement
Advertisement
ತಮಿಳುನಾಡು ಮಾಡಿದ ಮನವಿಯನ್ನು ತಿರಸ್ಕರಿಸಿದ ರಾಜ್ಯದ ಪ್ರತಿನಿಧಿ ರಾಕೇಶ್ ಸಿಂಗ್, ನೀರು ಬಿಡಲು ಒಪ್ಪಿಗೆ ಸೂಚಿಸದೆ ಸಭೆಯಿಂದ ಹೊರ ಬಂದರು. ನ್ಯಾಯಬದ್ಧವಾಗಿ ಕರ್ನಾಟಕ ಜುಲೈ ತಿಂಗಳ ಪಾಲು 31.24 ಟಿಎಂಸಿ ನೀರನ್ನು ಹರಿಸಬೇಕು. ಆದರೆ 34 ಟಿಎಂಸಿ ನೀರನ್ನು ಕೇಳುವ ಮೂಲಕ ತಮಿಳುನಾಡು ಕಾಲುಕೆರೆದು ಜಗಳಕ್ಕೆ ನಿಂತಿದೆ ಎಂದರು.
Advertisement
ಸಭೆಯಲ್ಲಿ ಚರ್ಚೆ ಬಳಿಕ ಮಾತನಾಡಿದ ಪ್ರಾಧಿಕಾರ ಅಧ್ಯಕ್ಷ ಮಸೂದ್ ಹುಸೈನ್, ಸುಪ್ರೀಂ ಕೋರ್ಟ್ 14.75 ಟಿಎಂಸಿ ನೀರನ್ನು ಕಡಿತಗೊಳಿಸಿತ್ತು. ಈಗ ಹರಿಸಬೇಕಾದ ನೀರಿನ ಪ್ರಮಾಣವನ್ನು ತಿಂಗಳುವಾರು ಹಂಚಿಕೆ ಮಾಡಿ ಮುಂದಿನ ಸಭೆಯಲ್ಲಿ ತಮಿಳುನಾಡಿಗೆ ಎಷ್ಟು ಪ್ರಮಾಣದ ನೀರು ಹರಿಸಬೇಕು ಎಂಬುದು ತೀರ್ಮಾನ ಮಾಡುತ್ತೆವೆ ಎಂದರು.
Advertisement
ಸಭೆಯಲ್ಲಿ ಏನು ಚರ್ಚೆ ಆಯ್ತು?
ನವದೆಹಲಿಯ ಕೇಂದ್ರ ಜಲ ಆಯೋಗ ಕಚೇರಿಯಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಆರಂಭಗೊಂಡ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ನೇತೃತ್ವದಲ್ಲಿ ಕಾವೇರಿ ಕಣಿವೆಯ ರಾಜ್ಯದ ಹಾಗೂ ಕೇಂದ್ರ ಸರ್ಕಾರ ಪ್ರತಿನಿಧಿಗಳು ಭಾಗಿಯಾಗಿ ಐದು ಗಂಟೆಗಳ ಚರ್ಚೆ ನಡೆಸಿದರು.
ಸಭೆ ಆರಂಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಕಾರ್ಯ ಚಟುವಟಿಕೆ ಹಾಗೂ ನಿಯಮಾವಳಿಗಳನ್ನು ರೂಪಿಸುವ ಬಗ್ಗೆ ಚರ್ಚೆ ನಡೆಯಿತು. ಕಾವೇರಿ ನದಿಯ ಎಂಟು ಜಲಾಶಯಗಳ ನಿರ್ವಹಣೆ ಹಾಗೂ ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ನಿಯೋಜನೆ, ಸಿಬ್ಬಂದಿಯ ಸೇವಾ ನಿಯಮಗಳು ರೂಪಿಸುವುದು ಪ್ರಾಧಿಕಾರದ ಕಾರ್ಯ ನಿರ್ವಹಣೆಗೆ ಅಗತ್ಯವಿರುವ ಹಣಕಾಸಿನ ಕ್ರೋಢಿಕರಣ, ಕಚೇರಿಗಾಗಿ ಸ್ಥಳ ನಿಯೋಜನೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಮಾಹಿತಿ ಸಂಗ್ರಹ: ಕಾವೇರಿ ನದಿ ವ್ಯಾಪ್ತಿಯಲ್ಲಿರುವ ಕೇರಳದ ಬಾಣಾಸುರ ಸಾಗರ, ರಾಜ್ಯದ ಹೇಮಾವತಿ, ಕಬಿನಿ, ಹಾರಂಗಿ, ಕೃಷ್ಣರಾಜಸಾಗರ, ತಮಿಳುನಾಡಿನ ಭವಾನಿ, ಅಮರಾವತಿ ಮತ್ತು ಮೆಟ್ಟೂರು ಜಲಾಶಯಗಳ ಒಳ ಮತ್ತು ಹೊರ ಹರಿವಿನ ಮಾಹಿತಿ ಸಂಗ್ರಹ ಮಾಡಲಾಯಿತು. ನೀರಿನ ಬಳಕೆ ಸಂಗ್ರಹ ಸಾಮಥ್ರ್ಯ, ಮಳೆಯ ಪ್ರಮಾಣ, ಬೆಳೆಯ ವ್ಯಾಪ್ತಿ ಮತ್ತು ಸ್ಥಳೀಯ ಹಾಗೂ ಕೈಗಾರಿಕಾ ಅಗತ್ಯತೆ ಈ ಸಮಿತಿಯಿಂದಲೇ ಕಾರ್ಯ ನಿರ್ವಹಿಸುವ ಕುರಿತು ಚರ್ಚೆ ನಡೆಯಿತು. ಜೂನ್ 1 ರಿಂದ ಜೂನ್ 30 ರವರೆಗೆ ಸಂಗ್ರಹವಾಗಿರುವ ನೀರಿನ ಪ್ರಮಾಣದ ಮಾಹಿತಿ ಪಡೆದ ಪ್ರಾಧಿಕಾರ, ಈ ಅವಧಿಯಲ್ಲಿ ಮಳೆಯ ಕೊರತೆ ಇದ್ದಲ್ಲಿ ಆ ಬಗ್ಗೆ ಚರ್ಚೆ ನಡೆಸಿ ಮಾಸಿಕ 10 ದಿನಗಳಂತೆ ಮೂರು ಭಾಗಗಳಲ್ಲಿ ಮಾಹಿತಿ ಸಂಗ್ರಹಿಸಿ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಿತು.
ತಮಿಳುನಾಡು ಖ್ಯಾತೆ ಏನು?
ಮೊದಲ ಸಭೆಯಲ್ಲೇ ತನ್ನ ಖ್ಯಾತೆ ಆರಂಭಿಸಿದ ತಮಿಳುನಾಡು ಜುಲೈ ತಿಂಗಳ ಪಾಲು 34 ಟಿಎಂಸಿ ನೀರಿಗಾಗಿ ಪ್ರಸ್ತಾವನೆ ಸಲ್ಲಿಸಿತು. ಆದರೆ ತಮಿಳುನಾಡು ಪ್ರಸ್ತಾಪವನ್ನು ರಾಜ್ಯದ ಪ್ರತಿನಿಧಿ ರಾಕೇಶ್ ಸಿಂಗ್ ತಿರಸ್ಕರಿಸಿದರು. ಬಳಿಕ ರಾಜ್ಯ ಸರ್ಕಾರದ ಜೊತೆ ಚರ್ಚೆ ನಡೆಸಿ ಈ ಕುರಿತು ಪ್ರತಿಕ್ರಿಯಿಸುವುದಾಗಿ ತಿಳಿಸಿ ಸಭೆಯಿಂದ ಹೊರ ಬಂದರು.
ಅಂದಹಾಗೇ ಸುಪ್ರೀಂಕೋರ್ಟ್ ಆದೇಶದ ಬಳಿಕ ನ್ಯಾಯಬದ್ಧವಾಗಿ ತಮಿಳುನಾಡು 31.24 ಟಿಎಂಸಿ ನೀರು ಕೇಳಬೇಕಿತ್ತು. ಆದರೆ 31.24 ಟಿಎಂಸಿ ಬದಲು 2.5 ಟಿಎಂಸಿ ನೀರು ಹೆಚ್ಚುವರಿ ಕೇಳಿ ಪ್ರಸ್ತಾಪ ಸಲ್ಲಿಸಿದ್ದು, ಜೂನ್ ನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದ ಕಾರಣ ಈಗಾಗಲೇ ಕರ್ನಾಟಕ ಒಂದು ಟಿಎಂಸಿ ನೀರು ತಮಿಳುನಾಡಿಗೆ ಹರಿಸಿದೆ. ಹೀಗಾಗೀ ಉಳಿದ 30.24 ಟಿಎಂಸಿ ನೀರು ಮಾತ್ರ ತಮಿಳುನಾಡಿಗೆ ಹರಿಸಬೇಕು. ಆದರೆ ತಮಿಳುನಾಡು ಹೆಚ್ಚುವರಿ ನೀರು ಕೇಳುವ ಮೂಲಕ ಮತ್ತೆ ಕಾಲ್ಕೇರದು ಜಗಳಕ್ಕೆ ನಿಂತಿದೆ.
ಯಾವ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು?
ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತ್ತು. ಈ ತೀರ್ಪು ಪ್ರಕಾರ ಜೂನ್ ನಲ್ಲಿ 10, ಜುಲೈ 34, ಅಗಸ್ಟ್ 50, ಸೆಪ್ಟೆಂಬರ್ 40, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಟಿಎಂಸಿ ಸೇರಿ ಒಟ್ಟು 192 ಟಿಎಂಸಿ ನೀರನ್ನು ಕನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕಿತ್ತು. ಈ ಐತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಎಎಂ ಖಾನ್ವೀಲ್ಕರ್ ಮತ್ತು ಅಮಿತಾವ್ ರಾಯ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಈ ವರ್ಷದ ಫೆಬ್ರವರಿ 16 ರಂದು ಐತೀರ್ಪನ್ನು ಸ್ವಲ್ಪ ಬದಲಾಯಿಸಿ 177.75 ಟಿಎಂಸಿ ನೀರನ್ನು ಕರ್ನಾಟಕ ಪ್ರತಿವರ್ಷ ತಮಿಳುನಾಡಿಗೆ ಬಿಡಬೇಕೆಂದು ಆದೇಶಿಸಿತ್ತು. ಅಷ್ಟೇ ಅಲ್ಲದೇ ಯಾವ ತಿಂಗಳಿನಲ್ಲಿ ಎಷ್ಟು ನೀರು ಬಿಡಬೇಕು ಎನ್ನುವುದನ್ನು ಕೇಂದ್ರ ನೇಮಿಸುವ ಸಂಸ್ಥೆ ನಿರ್ಧರಿಸಬೇಕು ಎಂದು ಹೇಳಿತ್ತು.
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Secon ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.
ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನ ಅಧಿಕಾರಿಗಳು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ.