ಚೆನ್ನೈ: ಕಳ್ಳರನ್ನು ಹಿಡಿಯುವ ಪೊಲೀಸರೇ ಮಸೀದಿಯೊಂದರ ಬಳಿ ಇರಿಸಿದ್ದ ಬೆಳ್ಳಿ ಲೋಟವನ್ನು ರಾತ್ರೋರಾತ್ರಿ ಕದ್ದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಮಿಳುನಾಡಿನ ಮರ್ಪನೈಕ್ಕಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳ್ಳರನ್ನು ಸೆರೆಹಿಡಿಯುವ ಪೊಲೀಸರೇ ಕಳ್ಳರಂತೆ ಲೋಟ ಕದ್ದಿದ್ದಾರೆ. ಪೊಲೀಸ್ ಪೇದೆ ಮತ್ತು ಹೋಂ ಗಾರ್ಡ್ ಸೇರಿಕೊಂಡು ಬೆಳ್ಳಿ ಲೋಟ ಕಳ್ಳತನ ಮಾಡಿದ್ದಾರೆ. ಕೊನೆಗೆ ಸಿಸಿಟಿವಿ ದೃಶ್ಯಾವಳಿಯಿಂದ ಈ ಪೊಲೀಸರ ಅಸಲಿಯತ್ತು ಬಯಲಾಗಿದೆ.
Advertisement
Advertisement
ಹೌದು, ಬಿಸಿಲ ಬೇಗೆಗೆ ದಣಿದು ಬರುವ ಜನರ ದಾಹ ತೀರಿಸುವ ಒಳ್ಳೆ ಉದ್ದೇಶದಿಂದ ಮರ್ಪನೈಕ್ಕಡು ಯುವಕರು ಗ್ರಾಮದ ಮಸೀದಿ ಬಳಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಅಲ್ಲದೆ ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಸಿ ಅದರ ಮೇಲೆ ಒಂದು ಬೆಳ್ಳಿ ಲೋಟ ಇರಿಸಿದ್ದರು. ಆದರೆ ನೀರಿನ ವ್ಯವಸ್ಥೆ ಮಾಡಿದ್ದ ಮಾರನೇ ದಿನವೇ ಬೆಳ್ಳಿ ಲೋಟ ಕಾಣೆಯಾಗಿತ್ತು.
Advertisement
ಮೊದಲು ಈ ವಿಷಯಕ್ಕೆ ತಲೆ ಕೆಡಿಸಿಕೊಳ್ಳದ ಯುವಕರು ಮತ್ತೊಂದು ಬೆಳ್ಳಿ ಲೋಟ ತಂದಿಟ್ಟರು. ಆದರೆ ಅದು ಕೂಡ ನಾಪತ್ತೆಯಾಗಿತ್ತು. ರಾತ್ರಿ ಹೊತ್ತಲ್ಲಿ ಯಾರೋ ಕಳ್ಳರು ಬಂದು ಬೆಳ್ಳಿ ಲೋಟ ಕದಿಯುತ್ತಿದ್ದಾರೆ, ಅವರನ್ನು ಹಿಡಿಯಲೇಬೇಕು ಎಂದು ನಿರ್ಧರಿಸಿದ ಯುವಕರು, ಸ್ಥಳದಲ್ಲಿ ಮತ್ತೊಂದು ಲೋಟ ತಂದಿಟ್ಟರು. ಜೊತೆಗೆ ಸ್ಥಳದಲ್ಲಿ ಒಂದು ಸಿಸಿಟಿವಿ ಕ್ಯಾಮೆರಾವನ್ನೂ ಕೂಡ ಅಳವಡಿಸಿದರು.
Advertisement
ಅದೇ ದಿನ ರಾತ್ರಿ ಪೊಲೀಸ್ ಪೇದೆ ಅಯ್ಯಪ್ಪನ್(30) ಮತ್ತು ಹೋಂ ಗಾರ್ಡ್ ವಡಿವಝಗನ್(31) ಬೈಕ್ ಮೇಲೆ ಬಂದು ಲೋಟವನ್ನು ಎಸ್ಕೇಪ್ ಮಾಡಿದ್ದಾರೆ. ಈ ದೃಶ್ಯಾವಳಿಗಳು ಮಸೀದಿ ಬಳಿ ಯುವಕರು ಇರಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸತ್ಯಾಂಶ ಹೊರಬಿದ್ದಿದೆ.
ಯುವಕರು ಈ ಬಗ್ಗೆ ಪೊಲೀಸ್ ಸಿಬ್ಬಂದಿ ವಿರುದ್ಧ ಕೀರಮಂಗಳಂ ಪೊಲೀಸ್ ಠಾಣೆಯಲ್ಲಿ ಎರಡು ಬೇರೆ ಬೇರೆ ದೂರನ್ನು ನೀಡಿದ್ದರು. ಈ ಸಂಬಂಧ ಇಂದು ಪುಡುಕ್ಕೊಟೈ ಎಸ್‍ಪಿ ಎಸ್. ಸೆಲ್ವರಾಜ್ ಪೊಲೀಸ್ ಪೇದೆ ಅಯ್ಯಪ್ಪನ್ ಅವರನ್ನು ವರ್ಗಾವಣೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ.