ಚೆನ್ನೈ: ಹೊಸೂರಿನಲ್ಲಿ (Hosur) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (International Airpor) ನಿರ್ಮಿಸುವುದಾಗಿ ತಮಿಳುನಾಡು (Tamil Nadu) ಸಿಎಂ ಸ್ಟಾಲಿನ್ (CM Stalin) ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ಪ್ರತಿ ವರ್ಷ 3 ಕೋಟಿ ಪ್ರಯಾಣಿಕರ ಸಂಚಾರ ಸಾಮರ್ಥ್ಯವನ್ನು ಹೊಂದಿರುವ ವಿಮಾನ ನಿಲ್ದಾಣ ಇದಾಗಲಿದ್ದು, 2,000 ಎಕರೆಗಳಷ್ಟು ವಿಸ್ತಾರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಹೊಸೂರು ಇತ್ತೀಚಿನ ವರ್ಷಗಳಲ್ಲಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಈ ಭಾಗದಲ್ಲಿ ಆಧುನಿಕ ಮೂಲಸೌಕರ್ಯಗಳ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಮೂಲಕ ಪ್ರಮುಖ ಆರ್ಥಿಕ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಹೊಸೂರು, ಕೃಷ್ಣಗಿರಿ ಮತ್ತು ಧರ್ಮಪುರಿ ಅಭಿವೃದ್ಧಿಗೆ ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವುದು ಅಗತ್ಯವಾಗಿದೆ ಅವರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ (Bengaluru) ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಜಾಗದ ಹುಡುಕಾಟ ಪ್ರಾರಂಭಿಸಿದ ನಂತರ ತಮಿಳುನಾಡಿನಿಂದ ಈ ನಿರ್ಧಾರ ಹೊರ ಬಿದ್ದಿದೆ. ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವ ಸಾಧ್ಯತೆಯಿದೆ.
ಹೊಸೂರಿನಲ್ಲಿ ಥಾಲಿ ವಿಮಾನ ನಿಲ್ದಾಣವನ್ನು ಹೊಂದಿರುವ ಮತ್ತು ನಿರ್ವಹಿಸುವ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್, ಕೇಂದ್ರ ಸರ್ಕಾರ ಮತ್ತು ಬೆಂಗಳೂರು ಇಂಟರ್‌ನ್ಯಾಶನಲ್ ಏರ್ಪೋಟ್ ಲಿಮಿಟೆಡ್ ನಡುವಿನ ರಿಯಾಯಿತಿ ಒಪ್ಪಂದದಿಂದಾಗಿ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ಬೆಂಗಳೂರು ವಿಮಾನ ನಿಲ್ದಾಣದಿಂದ 150 ಕಿಲೋಮೀಟರ್ ವೈಮಾನಿಕ ಅಂತರದಲ್ಲಿ 25 ವರ್ಷಗಳವರೆಗೆ (2033 ರವರೆಗೆ) ಯಾವುದೇ ಹೊಸ ಅಥವಾ ಅಸ್ತಿತ್ವದಲ್ಲಿರುವ ದೇಶೀಯ ವಿಮಾನ ನಿಲ್ದಾಣಗಳನ್ನು ತೆರೆಯುವುದನ್ನು ಈ ಒಪ್ಪಂದವು ನಿಷೇಧಿಸುತ್ತದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2008ರ ಮೇ 24 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
ವಿಮಾನ ನಿಲ್ದಾಣ ನಿರ್ಮಾಣದ ನಿರ್ಧಾರದ ಘೋಷಣೆ ಬಳಿಕ, ಪ್ರತಿಕ್ರಿಯಿಸಿರುವ ತಮಿಳುನಾಡು ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಅವರು, ಬೆಂಗಳೂರು ಮತ್ತು ಚೆನ್ನೈಗೆ ಸಮೀಪದ ಹೊಸೂರು ಅಭಿವೃದ್ಧಿ ಹೊಂದುತ್ತಿದೆ. ಬೆಳೆಯುತ್ತಿರುವ ಉದ್ಯಮಗಳಿಂದಾಗಿ ಆರ್ಥಿಕತೆ ಉತ್ತೇಜನಕ್ಕೆ ವಿಮಾನ ನಿಲ್ದಾಣ ನೆರವಾಗಲಿದೆ ಎಂದಿದ್ದಾರೆ.
ಹೊಸೂರಿನಲ್ಲಿ ಹೊಸ ವಿಮಾನ ನಿಲ್ದಾಣದ ಘೋಷಣೆ ಈ ಪ್ರದೇಶಕ್ಕೆ ಒಂದು ಹೆಗ್ಗುರುತಾಗಲಿದೆ. ಈ ಯೋಜನೆಯು ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೊಸೂರು ಮಾತ್ರವಲ್ಲದೆ ನೆರೆಯ ಜಿಲ್ಲೆಗಳಾದ ಧರ್ಮಪುರಿ ಮತ್ತು ಸೇಲಂಗೂ ಪ್ರಯೋಜನವಾಗಲಿದೆ. ಬೆಂಗಳೂರಿನ ವಿವಿಧ ಭಾಗಗಳಿಗೆ ಗಮನಾರ್ಹವಾದ ಉತ್ತೇಜನವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಹೊಸೂರ್ ಎಕ್ಸಿಮ್ ಗೇಟ್‍ವೇಗಳಿಗೆ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ. ಚೆನ್ನೈ, ತಿರುವಳ್ಳೂರ್, ಶ್ರೀಪೆರಂಬದೂರ್ ಮತ್ತು ಕೊಯಮತ್ತೂರು ಸೇರಿದಂತೆ ಇತರ ಪ್ರಮುಖ ವ್ಯಾಪಾರ ಕೇಂದ್ರಗಳು ಮತ್ತು ಕೈಗಾರಿಕಾ ಕ್ಲಸ್ಟರ್‍ಗಳಿಗೆ ಸಮೀಪದಲ್ಲಿದೆ. ಈ ಪ್ರದೇಶವು ಆಟೋ ಮತ್ತು ಇವಿ ಉತ್ಪಾದನೆ, ಲಾಜಿಸ್ಟಿಕ್ಸ್ ಸೇರಿದಂತೆ ಐಟಿ ಕೇಂದ್ರವಾಗಿಯೂ ಅಭಿವೃದ್ಧಿ ಹೊಂದುತ್ತಿದೆ. ಟಾಟಾ ಎಲೆಕ್ಟ್ರಾನಿಕ್ಸ್, ಟಿವಿಎಸ್, ಅಶೋಕ್ ಲೇಲ್ಯಾಂಡ್, ಟೈಟಾನ್ ಮತ್ತು ರೋಲ್ಸ್ ರಾಯ್ಸ್ (ಐಎಎಂಪಿಎಲ್) ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ.
ವಿಮಾನ ನಿಲ್ದಾಣದ ನಿರ್ಮಾಣದ ಉದ್ದೇಶದಿಂದ, ಬೆಂಗಳೂರು ಮೆಟ್ರೋವನ್ನು ಹೊಸೂರಿಗೆ ವಿಸ್ತರಿಸಲು ತಮಿಳುನಾಡು ಒತ್ತಾಯಿಸುತ್ತಿದೆ. ಬೊಮ್ಮಸಂದ್ರ ಮತ್ತು ಆರ್‍ವಿ ರಸ್ತೆಯನ್ನು ಸಂಪರ್ಕಿಸುವ ಬೆಂಗಳೂರು ಮೆಟ್ರೋದ ಹಳದಿ ಮಾರ್ಗವು ಡಿಸೆಂಬರ್ 2024ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಪ್ರಸ್ತಾವಿತ ಬೊಮ್ಮಸಂದ್ರ-ಹೊಸೂರು ಮೆಟ್ರೋ ಕಾರಿಡಾರ್ ಒಟ್ಟು 20.5 ಕಿಮೀ ವ್ಯಾಪಿಸಿದೆ, ಕರ್ನಾಟಕದಲ್ಲಿ 11.7 ಕಿಮೀ ಮತ್ತು ಉಳಿದ 8.8 ಕಿಮೀ ತಮಿಳುನಾಡಿನಲ್ಲಿ ಇದೆ.