ಚೆನ್ನೈ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯನ್ನು ಆತನ ಸಹಪಾಠಿಯೇ ಕತ್ತರಿ ಹಾಗೂ ಕ್ರಿಕೆಟ್ ಸ್ಟಂಪ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯಲ್ಲಿ ನಡೆದಿದೆ.
ದಿಂಡಿಗುಲ್ ಜಿಲ್ಲೆಯ ಕೊಡೈಕನಾಲ್‍ನ ಪರ್ವತ ಪ್ರದೇಶದಲ್ಲಿರುವ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು, ಭಾರತೀಯ ವಿದ್ಯಾಭವನದ ಗಾಂಧಿ ವಿದ್ಯಾಶ್ರಮದ 16 ವರ್ಷದ ವಿದ್ಯಾರ್ಥಿ ಎಸ್ ಕಪಿಲ್ ರಾಘವೇಂದ್ರ ಮೇಲೆ ಆತನ ಸಹಪಾಠಿಯೇ ಕತ್ತರಿ ಹಾಗೂ ಕ್ರಿಕೆಟ್ ಸ್ಟಂಪ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ವಿದ್ಯಾರ್ಥಿ ನಿಲಯದ ಆವರಣದಲ್ಲೇ ಘಟನೆ ನಡೆದಿದ್ದು, ರಾತ್ರಿ ಊಟ ಮುಗಿದ ನಂತರ ಸಣ್ಣ ವಿಷಯಕ್ಕೆ ಜಗಳವಾಗಿ ಜೋಡಿ ಕತ್ತರಿಯಿಂದ ಇರಿದು ನಂತರ ಕ್ರಿಕೆಟ್ ಸ್ಟಂಪ್‍ನಿಂದ ಆತನ ಸಹಪಾಠಿಯನ್ನು ಹೊಡೆದು ಕೊಲೆ ಮಾಡಿದ್ದಾನೆ.
ಕಪಿಲ್ ರಾಘವೇಂದ್ರ ಅವರ ತಂದೆ, ತಾಯಿ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ವಾಸವಾಗಿದ್ದು, ಕೊಡೈಕನಾಲ್‍ನಿಂದ ಸುಮಾರು 425 ಕಿ.ಮೀಯಷ್ಟು ದೂರವಿದೆ. ಘಟನೆ ನಡೆದ ನಂತರ ಗಾಯಗೊಂಡ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾರಿ ಮಧ್ಯೆಯೇ ವಿದ್ಯಾರ್ಥಿ ಸಾವನ್ನಪ್ಪಿರುವ ಕುರಿತು ವೈದ್ಯರು ದೃಢಪಡಿಸಿದ್ದಾರೆ.
ಕೊಲೆ ಆರೋಪದಡಿ ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದು, ಸೇಲಂ ಜಿಲ್ಲೆಯ ರಿಮ್ಯಾಂಡ್ ಹೋಮ್‍ಗೆ ಒಪ್ಪಿಸಲಾಗಿದೆ. ಪೊಲೀಸರು ವಿದ್ಯಾರ್ಥಿ ಕೊಲೆ ಮಾಡಲು ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದಾರೆ.
ಒಂದೆಡೆ ಪೊಲೀಸರು ತನಿಖೆ ನಡೆಸುತ್ತಿದ್ದರೆ, ಇನ್ನೊಂದೆಡೆ ಶಿಕ್ಷಣ ಇಲಾಖೆ ಸಹ ತನಿಖೆ ಕೈಗೊಂಡಿದ್ದು, ಶಾಲೆಗೆ ಭೇಟಿ ನೀಡಿ ಅಧಿಕಾರಿಗಳು ವಿವರ ಪಡೆದಿದ್ದಾರೆ. ಅಲ್ಲದೆ, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ವಸತಿ ಶಾಲೆಯು ರಾಜ್ಯ ರಾಜಧಾನಿ ಚೆನ್ನೈನಿಂದ ಸುಮಾರು 530 ಕಿ.ಮೀ. ದೂರದಲ್ಲಿದೆ. ಆರೋಪಿ ವಿದ್ಯಾರ್ಥಿ ವಿರುದ್ಧ ಈ ಹಿಂದೆಯೂ ಶಾಲಾ ಅಧಿಕಾರಿಗಳು ಎರಡು ಬಾರಿ ಶಿಸ್ತು ಕ್ರಮ ಜರುಗಿಸಿದ್ದರು. ಕಳೆದ ತಿಂಗಳಿನಿಂದ ಈ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ದ್ವೆಷವಿತ್ತು ಎಂದು ಹೇಳಲಾಗುತ್ತಿದೆ.