– ಪಾಕ್ ಮಾನವ ಹಕ್ಕುಗಳ ಸಂಘದ ನಂಟು
ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೆಸಂತ್ ನಗರದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಪೈಕಿ ಒಬ್ಬರಿಗೆ ಪಾಕಿಸ್ತಾನದೊಂದಿಗೆ ನಂಟಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಚೆನ್ನೈ ಪೊಲೀಸರು ಬಹಿರಂಗಪಡಿಸಿದ್ದಾರೆ.
ಚೆನ್ನೈ ಪೊಲೀಸ್ ಆಯುಕ್ತ ಎ.ಕೆ.ವಿಶ್ವನಾಥನ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಪ್ರತಿಭಟನಾಕಾರರ ಪೈಕಿ ಒಬ್ಬ ಮಹಿಳೆ ಪಾಕಿಸ್ತಾನಿ ಮೂಲದ ಮಾನವ ಹಕ್ಕುಗಳ ಗುಂಪಿನೊಂದಿಗೆ ಸಂಬಂಧ ಹೊಂದಿರಬಹುದು. ಸಂಘಟನೆಯೊಂದಿಗೆ ಅವಳು ಹೊಂದಿದ ಸಂಬಂಧದ ಕುರಿತು ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಅವಳ ಫೇಸ್ಬುಕ್ ಖಾತೆ ಮೂಲಕ ಪೊಲೀಸರು ಈ ಮಾಹಿತಿಯನ್ನು ಹುಡುಕಿದ್ದು, ಪ್ರೊಫೈಲಿನಲ್ಲಿ ಮಾನವ ಹಕ್ಕುಗಳ ಸಂಘಟನೆಯಲ್ಲಿ ಆಕೆ ಕೆಲಸ ಮಾಡುತ್ತಿರುವುದಾಗಿ ಉಲ್ಲೇಖಿಸಿದ್ದಾಳೆ. ಮಹಿಳೆಯು ನಗರದಲ್ಲಿ ನಡೆದ ಸಿಎಎ ವಿರುದ್ಧದ ಅನೇಕ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾಳೆ. ಅಲ್ಲದೆ ಕೋಲಂ ಡೆಮೊಸ್ಟ್ರೇಶನ್ಸ್ ನೊಂದಿಗೆ ಸಹ ಸಂಪರ್ಕ ಹೊಂದಿದ್ದಾಳೆ ಎಂದು ತಿಳಿಸಿದ್ದಾರೆ.
Advertisement
ನಗರದಲ್ಲಿ ನಡೆದ ಕೋಲಂ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ಏಳು ಜನರನ್ನು ಚೆನ್ನೈ ಪೊಲೀಸರು ಬಂಧಿಸಿದ್ದರು. ನಂತರ ಪೊಲೀಸ್ ಠಾಣೆಗೆ ಆಗಮಿಸಿದ ಇಬ್ಬರು ವಕೀಲರನ್ನು ಸಹ ವಶಕ್ಕೆ ಪಡೆದಿದ್ದರು.
Advertisement
ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಪ್ರತಿಭಟನೆ ಹಿಂಸಾತ್ಮಕತೆಯಿಂದ ಕೂಡಿತ್ತು. ಹೀಗಾಗಿ ವಶಕ್ಕೆ ಪಡೆಯಲು ಸೂಚಿಸಿದೆವು. ಸಣ್ಣ ಗುಂಪೊಂದು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಕೆಲಸ ಮಾಡಿತ್ತು. ಮುನ್ನೆಚ್ಚರಿಕೆ ಕೈಗೊಳ್ಳುವ ಭಾಗವಾಗಿ ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಆಯುಕ್ತರು ತಿಳಿಸಿದ್ದಾರೆ.
ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹಾಗೂ ಎಂಡಿಎಂಕೆ ನಾಯಕ ವೈಕೋ ಅವರು ಚೆನ್ನೈ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದು, ಈ ಕುರಿತು ಪ್ರತಿಭಟನೆ ನಡೆಸಿದ್ದರು. ನಮಗೆ ಸಿಎಎ ಹಾಗೂ ಎನ್‍ಆರ್‍ಸಿ ಬೇಡ ಎಂಬ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದ್ದರು.