ತಮಿಳುನಾಡು ರಾಜಕೀಯದಲ್ಲಿ ಟ್ವಿಸ್ಟ್ – ಶಶಿಕಲಾ ಹತ್ತಿಕ್ಕಲು ಎಐಎಡಿಎಂಕೆ ಬಣಗಳ ಸಭೆ

Public TV
1 Min Read
ops sasiskala

ಚೆನ್ನೈ: ಜಯಲಲಿತಾ ನಿಧನದ ನಂತರ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಎಐಎಡಿಎಂಕೆ ಪಕ್ಷ ಇಬ್ಭಾಗವಾಗಿದ್ರಿಂದ ಎರಡೂ ಬಣಕ್ಕೂ ಎರಡೆಲೆ ಚಿಹ್ನೆಯನ್ನ ನೀಡಲು ಚುನಾವಣಾ ಆಯೋಗ ಈ ಹಿಂದೆ ನಿರಾಕರಿಸಿತ್ತು. ಹೀಗಾಗಿ ಎಐಎಡಿಎಂಕೆ ಪಕ್ಷದ ಎರಡೂ ಬಣಗಳನ್ನ ಮತ್ತೆ ಒಂದಾಗಿಸೋ ಪ್ರಯತ್ನ ನಡೆದಿದೆ.

ಸಿಎಂ ಪಳನಿ ಸ್ವಾಮಿ ನೇತೃತ್ವದ ಬಣ ಹಾಗೂ ಮಾಜಿ ಸಿಎಂ ಓ ಪನ್ನೀರ್ ಸೆಲ್ವಂ ನೇತೃತ್ವದ ಬಣಗಳು ಮತ್ತೆ ಒಂದಾಗೋ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರವಾಗಲಿದೆ. ಇಂದು ಚೆನ್ನೈನಲ್ಲಿ ಎಐಎಡಿಎಂಕೆಯ ಎಲ್ಲಾ ಶಾಸಕರ ಸಭೆ ಕರೆಯಲಾಗಿದೆ. ಈ ಸಭೆಗೆ ಹಾಜರಾಗುವಂತೆ ಪನ್ನೀರ್ ಸೆಲ್ವಂ ಬಣಕ್ಕೂ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗಿದೆ. ಎರಡೂ ಬಣಗಳು ಒಂದಾಗಲು ಸಿದ್ಧವಿರೋದಾಗಿ ಓಪಿಎಸ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಈ ಎಲ್ಲಾ ಬೆಳವಣಿಗೆಗಳು ನಡೆದಿದೆ. ಪನ್ನೀರ್ ಸೆಲ್ವಂ ಬಣದ ಶಾಸಕರು ಸಹ ಇಂದಿನ ಸಭೆಯಲ್ಲಿ ಭಾಗಿವಹಿಸೋ ಸಾಧ್ಯತೆ ಇದೆ.

ಸೋಮವಾರ ರಾತ್ರಿ ಚೆನ್ನೈನಲ್ಲಿ ಇಂಧನ ಸಚಿವ ತಂಗಮಣಿ ನಿವಾಸದಲ್ಲಿ ತುರ್ತು ಸಭೆ ಸೇರಿದ ಶಶಿಕಲಾ ಬಣದ ಹಿರಿಯ ಸಚಿವರು ಎರಡೂ ಬಣಗಳನ್ನ ಒಂದುಗೂಡಿಸೋ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಸಚಿವರು ಶಾಸಕರು ಸೇರಿ ಸುಮಾರು 25 ಮಂದಿ ಭಾಗಿಯಾಗಿದ್ರು. ರಾತ್ರಿಯ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡಿನ ಹಣಕಾಸು ಸಚಿವ ಜಯಕುಮಾರ್, ಅಮ್ಮನ ಪಕ್ಷವನ್ನ ಕಾಪಾಡಲು ಎರಡೂ ಬಣಗಳು ಒಂದಾಗಿ ಎರಡೆಲೆ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡೋ ಬಗ್ಗೆ ಚರ್ಚೆ ನಡೆಸಿರೋದಾಗಿ ಮಾಹಿತಿ ನೀಡಿದ್ರು.

ಇನ್ನು ತಮಿಳುನಾಡಿನ ರಾಜಕೀಯ ವಿದ್ಯಮಾನಗಳ ಕುರಿತು ಶಶಿಕಲಾ ಜೊತೆ ಚರ್ಚಿಸಲು ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದ ಟಿಟಿ ದಿನಕರನ್ ಚೆನ್ನೈಗೆ ವಾಪಸ್ಸಾಗಿದ್ದಾರೆ. ಸೋಮವಾರ ರಾತ್ರಿ ಬೆಂಗಳೂರಿಗೆ ಆಗಮಿಸಿ ಖಾಸಗಿ ಹೋಟೆಲ್‍ನಲ್ಲಿ ದಿನಕರನ್ ಉಳಿದುಕೊಂಡಿದ್ದರು. ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾರನ್ನ ಇಂದು ಮಧ್ಯಾಹ್ನನದ ವೇಳೆಗೆ ಭೇಟಿ ಮಾಡಲಿದ್ದಾರೆಂದು ಹೇಳಲಾಗಿತ್ತು. ಆದ್ರೆ ಶಶಿಕಲಾರನ್ನ ಭೇಟಿ ಮಾಡದೆ ವಾಪಸ್ಸಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *