ಚೆನ್ನೈ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಂತರ ಈಗ ಕಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಈಗ ಅವರ ವಿರುದ್ಧ ತಮಿಳು ಚಿತ್ರರಂಗ ಗರಂ ಆಗಿದೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.
ರಶ್ಮಿಕಾ ಮಂದಣ್ಣ ಅವರು ನಟ ಕಾರ್ತಿ ಅವರ ಜೊತೆ ತಮ್ಮ ಮೊದಲ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ. ಹೀಗಾಗಿ ತಮಿಳು ಚಿತ್ರರಂಗ ಅವರ ವಿರುದ್ಧ ಗರಂ ಆಗಿದೆ ಎಂಬ ವಿಷಯ ತಮಿಳು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ನೋಡಿದ ನಂತರ ತಮಿಳುನಾಡಿನ ಜನತೆ ರಶ್ಮಿಕಾ ಅವರನ್ನು ಕಾಲಿವುಡ್‍ಗೆ ಸ್ವಾಗತಿಸಿ ಅವರಿಗೆ ಶುಭಾಶಯ ಕೋರಿದ್ದಾರೆ. ಆದರೆ ರಶ್ಮಿಕಾ ಚಿತ್ರದ ಟೈಟಲ್ ರಿವೀಲ್ ಮಾಡಿದ್ದು, ಚಿತ್ರತಂಡಕ್ಕೆ ಇಷ್ಟವಾಗಲಿಲ್ಲ. ಮೂಲಗಳ ಪ್ರಕಾರ ಚಿತ್ರತಂಡ ಅಧಿಕೃತವಾಗಿ ಟೈಟಲ್ ಪ್ರಕಟಿಸಲು ನಿರ್ಧರಿಸಿತ್ತು ಎನ್ನಲಾಗಿದೆ.
ಸಾಮಾನ್ಯವಾಗಿ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾದ ಟೈಟಲ್ ಫಸ್ಟ್ ಲುಕ್ ಪೋಸ್ಟರ್ ಮೂಲಕ ರಿವೀಲ್ ಮಾಡಲಾಗುತ್ತದೆ. ಸುಲ್ತಾನ್ ಚಿತ್ರತಂಡ ಕೂಡ ಇದೇ ರೀತಿ ಮಾಡುವುದಕ್ಕೆ ನಿರ್ಧರಿಸಿತ್ತು. ಆದರೆ ಅಷ್ಟರಲ್ಲಿ ರಶ್ಮಿಕಾ ಚಿತ್ರದ ಹೆಸರನ್ನು ರಿವೀಲ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಈ ವರ್ತನೆಯಿಂದ ಸುಲ್ತಾನ್ ಚಿತ್ರತಂಡ ಹಾಗೂ ಚಿತ್ರದ ನಾಯಕ ಕಾರ್ತಿ ಅವರ ಮೇಲೆ ಬೇಸರಗೊಂಡಿದ್ದಾರೆ. ಅಲ್ಲದೆ ತನ್ನ ತಪ್ಪಿಗೆ ರಶ್ಮಿಕಾ ಚಿತ್ರತಂಡದ ಬಳಿ ಕ್ಷಮೆ ಕೇಳಿದ್ದಾರೆ ಎಂಬ ಮಾತುಗಳು ಕೂಡ ಹರಿದಾಡುತ್ತಿದೆ.
ಸುಲ್ತಾನ್ ಚಿತ್ರವನ್ನು ರೆಮೋ ಖ್ಯಾತಿಯ ಭಾಗ್ಯರಾಜ್ ಕಣ್ಣನ್ ನಿರ್ದೇಶಿಸುತ್ತಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿ ಎಸ್.ಆರ್ ಪ್ರಭು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿವೇಕ್ ಮರ್ವೀನ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.