Connect with us

Cinema

ತಮಿಳು ನಟ ವಿಶಾಲ್ ಬಂಧನ

Published

on

ಚೆನ್ನೈ: ತಮಿಳು ಚಿತ್ರ ನಿರ್ಮಾಪಕರ ಸಂಘದ (ಟಿಎಫ್‍ಪಿಸಿ) ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದಕ್ಕೆ ನಟ, ನಿರ್ಮಾಪಕ ವಿಶಾಲ್ ಅವರನ್ನು ಗುರುವಾರ ಚೆನ್ನೈನ ಟಿ. ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 19 ರಂದು ಕೆಲ ನಿರ್ಮಾಪಕರು ವಿಶಾಲ್ ಅವರ ವಿರುದ್ಧ ಪ್ರತಿಭಟನೆ ಮಾಡಿ ಚೆನ್ನೈನ ಟಿ. ನಗರ ಹಾಗೂ ಅಣ್ಣ ಸಲೈನಲ್ಲಿರುವ ತಮಿಳು ನಿರ್ಮಾಪಕರ ಸಂಘದ ಕಚೇರಿಗೆ ಬೀಗ ಹಾಕಿದ್ದರು. ವಿಶಾಲ್ ಅವರು 2015ರಲ್ಲಿ ನಡೆದ ಟಿಎಫ್‍ಪಿಸಿ ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಅಧ್ಯಕ್ಷರಾದ ಮೇಲೆ ಮರೆತಿದ್ದಾರೆ ಎಂದು ಆರೋಪಿಸಿ ಕೆಲ ನಿರ್ಮಾಪಕರು ಅವರ ವಿರುದ್ಧ ಪ್ರತಿಭಟನೆ ಮಾಡಿದ್ದರು.

ಇಂದು ವಿಶಾಲ್ ಹಾಗೂ ಇತರೆ ಸದಸ್ಯರು ಟಿಎಫ್‍ಪಿಸಿ ಕಚೇರಿಗೆ ಬಂದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ಟಿಎಫ್‍ಪಿಸಿಗೆ ಸಂಬಂಧವಿಲ್ಲದ ವ್ಯಕ್ತಿಗಳಿಗೆ ಕಚೇರಿಗೆ ಬೀಗ ಹಾಕಿದ್ದಾರೆ ಅದಕ್ಕೆ ನೀವು ಸಾಥ್ ಕೊಟ್ಟಿದ್ದೀರಿ. ಒಂದು ವೇಳೆ ಕಚೇರಿಯಲ್ಲಿ ಮುಖ್ಯವಾದ ಕೆಲಸವಿದ್ದರೆ ಸದಸ್ಯರು ಹೋಗೋದು ಹೇಗೆ? ಕಚೇರಿ ಕೆಲಸ ನಿಲ್ಲಿಸಿದರೆ ನಷ್ಟ ಯಾರಿಗೆ ಎಂದು ಪೊಲೀಸರನ್ನು ವಿಶಾಲ್ ಪ್ರಶ್ನಿಸಿದ್ದಾರೆ. ಹಾಗೆಯೆ ಕೆಲ ಕಾಲ ಪೊಲೀಸ್ ಸಿಬ್ಬಂದಿ ಹಾಗೂ ವಿಶಾಲ್ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ವಿಶಾಲ್ ಹಾಗೂ ಅವರ ಸಹಚರರು ಕಚೇರಿ ಬೀಗ ಒಡೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಶಾಲ್ ಅವರನ್ನು ಬಂಧಿಸಿದ್ದಾರೆ.

ಈ ಘಟನೆ ಕುರಿತು ನಟ ವಿಶಾಲ್ ಪ್ರತಿಕ್ರಿಯಿಸಿ, ನಾನು ಪೊಲೀಸರಿಗೆ ಹಾಗೂ ಅವರ ಕೆಲಸಕ್ಕೆ ಗೌರವ ನೀಡುತ್ತೇನೆ. ಆದರೆ ಕೆಲವು ದಾಖಲೆಗಳು ಹಾಗೂ ಲೆಕ್ಕದ ಪುಸ್ತಕಗಳನ್ನು ಇಡಲು ಕಚೇರಿ ಬೀಗ ಒಡೆಯಲು ಯತ್ನಿಸಿದೆ ಅಷ್ಟೇ ಎಂದು ಹೇಳಿದ್ದಾರೆ.

ಟಿಎಫ್‍ಪಿಸಿಗೆ ಸಂಬಂಧವಿಲ್ಲದ ಜನರು ಕಚೇರಿಯ ಬೀಗ ಹಾಕಿಸಿದ್ದಾರೆ. ಆದರೆ ಪೊಲೀಸರು ಯಾವ ತಪ್ಪು ಮಾಡದಿದ್ದರೂ ನನ್ನನ್ನು ಹಾಗೂ ನನ್ನ ಜೊತೆಗಾರರನ್ನು ಬಂಧಿಸಿದ್ದಾರೆ. ಇದನ್ನು ನಂಬಲಾಗುತ್ತಿಲ್ಲ. ನಾವು ಈ ಪ್ರಕರಣದ ವಿರುದ್ಧ ಹೋರಾಡುತ್ತೇವೆ. ಇಳೆಯರಾಜ ಅವರ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿ ಕಷ್ಟದಲ್ಲಿರುವ ನಿರ್ಮಾಪಕರಿಗೆ ಸಹಾಯ ಮಾಡುತ್ತೇವೆ ಎಂದು ನಟ ವಿಶಾಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಸದ್ಯ ವಿಶಾಲ್, ಮಂಸೂರ್ ಅಲಿ ಖಾನ್ ಹಾಗೂ ಟಿಎಫ್‍ಪಿಸಿಯ ಇತರೆ ಸದಸ್ಯರನ್ನು ಪೊಲೀಸರು ಬಂಧಿಸಿದ್ದು, ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *