ಮಂಡ್ಯ: ಸ್ಥಳೀಯ ಶಾಸಕ, ಎಂಎಲ್‍ಸಿಯ ಬೆಂಬಲಿಗನಾಗಿರುವ ತಾಲೂಕು ಪಂಚಾಯಿತಿ ಸದಸ್ಯರೊಬ್ಬರು ಇಡೀ ಹಳ್ಳಿಯನ್ನೇ ತಮ್ಮ ತಾಯಿಯ ಹೆಸರಿಗೆ ರಿಜಿಸ್ಟಾರ್ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಜಿಲ್ಲೆಯ ನಾಗಮಂಗಲ ತಾಲೂಕಿನ ಮದಲಹಳ್ಳಿ ಗ್ರಾಮದ ಜನ ಹಲವು ವರ್ಷಗಳಿಂದ ಅಲ್ಲೇ ವಾಸಿಸುತ್ತಿದ್ದಾರೆ. ಆದರೆ ಇದೀಗ ಗ್ರಾಮದಲ್ಲಿರುವ ಮನೆ, ದೇವಾಲಯ, ಸರ್ಕಾರಿ ಶಾಲೆ ಸೇರಿದಂತೆ ಸಂಪೂರ್ಣ ಹಳ್ಳಿಯನ್ನೇ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ. ಕಳೆದುಕೊಳ್ಳುವ ಭೀತಿಯಲ್ಲಿ ತಮ್ಮ ಹಳ್ಳಿಯ ಉಳಿವಿಗಾಗಿ ಬೀದಿಗಿಳಿದು ಪ್ರತಿಭಟನೆಯನ್ನು ಕೂಡ ಮಾಡಿ ಹೋರಾಡುತ್ತಿದ್ದಾರೆ.
ಗ್ರಾಮದ ಸರ್ವೆ ನಂಬರ್ 190/1 ರಲ್ಲಿ ಬರುವ 4 ಎಕರೆ 16 ಗುಂಟೆ ಜಮೀನು ಮುಜರಾಯಿ ಇಲಾಖೆಗೆ ಸೇರಿದ್ದು, ಶ್ರೀ ಲಕ್ಷ್ಮಿ ದೇವರ ದೇವಸ್ಥಾನಕ್ಕೆ ಜಮೀನನ್ನು ಅರ್ಚಕರ ಹೆಸರಿಗೆ ವಿಲ್ ಮಾಡಲಾಗಿತ್ತು. ಈ ನಾಲ್ಕು ಎಕರೆ 16 ಗುಂಟೆ ಜಮೀನಿನಲ್ಲಿ 1 ಎಕರೆ 16 ಗುಂಟೆ ಜಮೀನನ್ನು ನಿಯಮಾನುಸಾರ ಶಾಲೆ, ದೇವಸ್ಥಾನ ಮತ್ತು ಮನೆ ನಿರ್ಮಿಸಲು ಮದಲಹಳ್ಳಿ ಗ್ರಾಮಸ್ಥರಿಗೆ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಮದಲಹಳ್ಳಿಯ ಸುಮಾರು 30 ಕುಟುಂಬಗಳು ಈ ಜಾಗದಲ್ಲಿ ಕಳೆದ 50 ವರ್ಷಗಳ ಹಿಂದೆಯೇ ಮನೆಕಟ್ಟಿಕೊಂಡು ವಾಸವಾಗಿದ್ದಾರೆ.
ಆದರೆ ಇದೀಗ 4 ಎಕರೆ 16 ಗುಂಟೆ ಸಂಪೂರ್ಣ ಜಮೀನನ್ನು ಶಾಸಕ ಸುರೇಶ್‍ಗೌಡ ಬೆಂಬಲಿಗ ತಾಲೂಕು ಪಂಚಾಯಿತಿ ಸದಸ್ಯ ಹೇಮರಾಜ್ ತನ್ನ ತಾಯಿ ಲಕ್ಷ್ಮಿದೇವಿ ಹೆಸರಿಗೆ ಅಕ್ರಮವಾಗಿ ರಿಜಿಸ್ಟಾರ್ ಮಾಡಿದ್ದಾರೆ. ಅಕ್ರಮ ಎಸಗಲು ಲಕ್ಷ್ಮಿದೇವಿಯ ಸಹೋದರ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಶಿಕ್ಷಕ ಸಿ.ಜೆ.ಕುಮಾರ್ ತಮ್ಮ ಪ್ರಭಾವ ಬಳಸಿ ಹೇಮರಾಜ್ ಅವರಿಗೆ ಈ ಅಕ್ರಮ ಮಾಡಲು ಸಹಾಯ ಮಾಡಿದ್ದಾರೆ ಎಂದು ಮದಲಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ 40 ಕ್ಕೂ ಹೆಚ್ಚು ಮನೆಗಳು, ಸರ್ಕಾರಿ ಶಾಲೆ, ದೇವಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಗ್ರಾಮಸ್ಥರು ನಾಗಮಂಗಲ ತಹಶಿಲ್ದಾರ್ ನಂಜುಂಡಯ್ಯ ಅವರನ್ನು ಭೇಟಿ ಮಾಡಿ ರಕ್ಷಣೆಗೆ ಮನವಿ ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ ನ್ಯಾಯ ದೊರಕಿಸಿಕೊಡುವುದಾಗಿ ತಹಶಿಲ್ದಾರ್ ನಂಜುಂಡಯ್ಯ ಭರವಸೆ ನೀಡುತ್ತಿದ್ದಾರೆ. ಆದರೆ ಗ್ರಾಮಸ್ಥರ ಆರೋಪ ನಿರಾಕರಿಸುತ್ತಿರುವ ಲಕ್ಷ್ಮಿದೇವಿಯ ತಮ್ಮ, ಶಿಕ್ಷಕ ಸಿ.ಜೆ.ಕುಮಾರ್ ಜಮೀನಿನ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ಲಕ್ಷ್ಮಿದೇವಿ ನನ್ನ ಅಕ್ಕನೇ ಆಗಿದ್ದರೂ ಜಮೀನು ಪರಬಾರೆಯಲ್ಲಿ ನಾನು ಯಾವ ಪ್ರಭಾವವನ್ನು ಬಳಸಿಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವವರ ವಿರುದ್ಧ ಮಾನನಷ್ಟ ಕೇಸ್ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಇತ್ತ ಲಕ್ಷ್ಮಿದೇವಿಯ ಮಗ, ತಾಲೂಕು ಪಂಚಾಯ್ತಿ ಸದಸ್ಯ ಹೇಮರಾಜ್ ನಾನು ಕಾನೂನು ಬದ್ಧವಾಗಿ ನನ್ನ ತಾಯಿಯ ಹೆಸರಿಗೆ ಜಮೀನು ಕೊಂಡುಕೊಂಡಿದ್ದೇನೆ. ನನ್ನ ಬಳಿ ಎಲ್ಲ ಸೂಕ್ತ ದಾಖಲೆ ಇದೆ. ಅಲ್ಲಿ ಮನೆ ಕಟ್ಟಿರುವವರೇ ಅಕ್ರಮವಾಗಿ ಮನೆ ಕಟ್ಟಿದ್ದಾರೆ. ಈ ಬಗ್ಗೆ ನ್ಯಾಯಾಲಯದ ತೀರ್ಪಿಗೆ ನಾನು ಬದ್ಧನಾಗಿರುತ್ತೇನೆ ಅಂತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv