ಬೆಂಗಳೂರು: ನೀರಾವರಿ ಯೋಜನೆಯ ವಿಚಾರವಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲೇ ಜಟಾಪಟಿಗೆ ಬಿದ್ದಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಸದಾ ಸುದ್ದಿಯಲ್ಲಿರುವ ರೇವಣ್ಣ ಹಾಗೂ ಡಿಕೆ ಶಿವಕುಮಾರ್ ಪರಸ್ಪರ ವಾಕ್ಸಮರ ನಡೆಸಿದ್ದಾರೆ. ನೀರಾವರಿ ಯೋಜನೆ ವಿಚಾರವಾಗಿ ಇಬ್ಬರ ನಡುವೆ ಜಟಾಪಟಿ ಜೋರಾಗಿಯೇ ನಡೆದಿದೆ. ಇಂದು ವಿಧಾನಸಭೆಯ ಕಲಾಪದ ವೇಳೆ ರೇವಣ್ಣ ಹಾಸನ ಜಿಲ್ಲೆ ಜೆಡಿಎಸ್ ಶಾಸಕರ ಪರ ಬ್ಯಾಟಿಂಗ್ ಮಾಡುತ್ತಾ, ಹೆಚ್ಚುವರಿ ವಿಷಯವನ್ನಾಗಿ ನೀರಾವರಿ ಯೋಜನೆಯನ್ನು ಸದನದಲ್ಲಿ ಪ್ರಸ್ತಾಪಿಸಿದರು. ಈ ವೇಳೆ ರೇವಣ್ಣರ ನಿರ್ಧಾರಕ್ಕೆ ಡಿಕೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲೇ, ಇವೆಲ್ಲಾ ನಡೆಯುವುದಿಲ್ಲವೆಂದು ಖಾರವಾಗಿ ಉತ್ತರಿಸಿದ್ದಾರೆ ಎನ್ನಲಾಗುತ್ತಿದೆ.
ನಮ್ಮ ಶಾಸಕರದ್ದು ಸಾಕಷ್ಟು ನೀರಾವರಿ ಯೋಜನೆಗಳಿವೆ. ಎಲ್ಲವನ್ನು ಒಟ್ಟಿಗೆ ಮಾಡೋಣ. ಈಗ ನಿಮ್ಮ ಶಾಸಕರದ್ದು ಮಾತ್ರ ತಂದ್ರೆ ಒಪ್ಪಿಗೆ ಕೊಡುವುದಕ್ಕೆ ಆಗಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರಂತೆ. ಅದೇ ವೇಳೆ ಸಚಿವ ವೆಂಕರಮಣಪ್ಪ ಕೂಡ ಮಾತನಾಡಿ, ನಮ್ಮದೂ ಇದೇ, ಮೊದಲು ಅದನ್ನು ಮಾಡಿ ಎಂದು ಪಟ್ಟು ಹಿಡಿದರು ಎಂಬ ಮಾಹಿತಿಗಳು ಲಭ್ಯವಾಗಿವೆ.
ಈ ವೇಳೆ ಸದನದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ರೇವಣ್ಣ ಹಾಗೂ ಡಿಕೆಶಿಯವರ ಜಟಾಪಟಿಯ ನಡುವೆ, ಅವರು ತಂದ ವಿಷಯವನ್ನು ಒಪ್ಪದೇ, ಸದನವನ್ನು ಮುಂದೂಡಿದರು. ಇಷ್ಟೆಲ್ಲಾ ಸನ್ನಿವೇಶ ನಡೆಯುತ್ತಿದ್ದರೂ ಸಿಎಂ ಕುಮಾರಸ್ವಾಮಿ ಮಾತ್ರ ಸುಮ್ಮನೆ ಕುಳಿತ್ತಿದ್ದರು ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv