ಕಾಬೂಲ್: ಅಮೇರಿಕ ಸೇನೆ ಸಂಪೂರ್ಣ ಖಾಲಿ ಮಾಡಿದ್ದು ಇನ್ನೊಂದು ವಾರದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಆಡಳಿತ ಆರಂಭವಾಗಲಿದೆ. ಸರ್ಕಾರ ರಚನೆಗೆ ತಾಲಿಬಾನ್ ಸಿದ್ದತೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಹಿರಿಯ ನಾಯಕರು ರೂಪುರೇಷೆಗಳನ್ನು ಸಿದ್ದಪಡಿಸುತ್ತಿದ್ದಾರೆ.
ಅಫ್ಘಾನ್‍ನಲ್ಲಿ ಇರಾನ್ ಮಾದರಿ ಅಧ್ಯಕ್ಷೀಯ ಆಡಳಿತ ಜಾರಿ ಮಾಡುವ ಉದ್ದೇಶವನ್ನು ತಾಲಿಬಾನ್ ನಾಯಕರು ಹೊಂದಿದ್ದು, ದೇಶದ ರಾಜಕೀಯ ಮತ್ತು ಧಾರ್ಮಿಕ ನಿರ್ಧಾರಗಳಿಗೆ ಅಧ್ಯಕ್ಷರೇ ಸಾರ್ವಭೌಮರಾಗಲಿದ್ದಾರೆ ಎನ್ನಲಾಗಿದೆ. ಅಫ್ಘಾನ್ ಹೊಸ ಅಧ್ಯಕ್ಷರು ಕಂದಹಾರ್ ನಿಂದ ಕಾಬೂಲ್ ಆಡಳಿತವನ್ನು ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
ತಾಲಿಬಾನ್ ಉಗ್ರರ ಹೊಸ ಸರ್ಕಾರದಲ್ಲಿ ನ್ಯಾಯಾಂಗ, ಆಂತರಿಕ ಭದ್ರತೆ, ರಕ್ಷಣಾ, ವಿದೇಶಾಂಗ ವ್ಯವಹಾರಗಳು, ಹಣಕಾಸು, ಮಾಹಿತಿ ಪ್ರಸಾರ ಸೇರಿ 26 ಇಲಾಖೆಯ ಕ್ಯಾಬಿನೆಟ್ ಇರಲಿದೆ. ಇದನ್ನು ನಿಭಾಯಿಸಲು ಪ್ರಧಾನಮಂತ್ರಿ ರೂಪದ ಹುದ್ದೆಯನ್ನು ಸೃಷ್ಟಿಸಲು ತಾಲಿಬಾನಿಗಳು ಚಿಂತಿಸಿದ್ದಾರಂತೆ.
Advertisement
ತಾಲಿಬಾನ್ ಸಂಘಟನೆಯ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡಜಾದ್ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಹಿಬತುಲ್ಲಾ ಅಖುಂಡಜಾದ್ ಆಪ್ತ ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಅಥವಾ ತಾಲಿಬಾನ್ ಮತ್ತೊರ್ವ ಮುಖಂಡ ಮುಲ್ಲಾ ಒಮರ್ ಪುತ್ರ ಮುಲ್ಲಾ ಯಾಕೂಬ್ ಪ್ರಧಾನಿಯಾಗುವ ಸಾಧ್ಯತೆ ಎನ್ನಲಾಗುತ್ತಿದೆ. ಕ್ಯಾಬಿನೆಟ್ ನಲ್ಲಿ ಶೇ.42 ರಷ್ಟಿರುವ ಪಶ್ತೂನ್‍ಗಳು ಸೇರಿ ಇತರೆ ಜಾತಿಗೂ ಅವಕಾಶ ಸಿಗಬಹುದು ಎಂದು ವರದಿಯಾಗಿದೆ.
Advertisement
ಇತರೆ ದೇಶಗಳೊಂದಿಗೆ ಸ್ನೇಹ ಸೌಹಾರ್ದತೆ ಕಾಪಾಡಿಕೊಳ್ಳಲು ದೃಷ್ಟಿಯಿಂದ ವಿದೇಶಾಂಗ ವ್ಯವಹಾರಗಳಿಗೆ ತಾಲಿಬಾನ್ ವಿಶೇಷ ಆದ್ಯತೆ ನೀಡಬಹುದು. ಈಗಾಗಲೇ ತಾಲಿಬಾನ್ ಮುಖಂಡರ ಜೊತೆಗೆ ಭಾರತ, ಇರಾನ್, ಕತಾರ್, ಪಾಕಿಸ್ತಾನ, ಚೀನಾ ಸೇರಿದಂತೆ ಹಲವು ದೇಶಗಳಿಂದ ಮಾತುಕತೆ ನಡೆಸುತ್ತಿವೆ. ಪಾಕಿಸ್ತಾನದಲ್ಲಿ ಮಾಜಿ ತಾಲಿಬಾನ್ ರಾಜತಾಂತ್ರಿಕ ಮುಹಮ್ಮದ್ ಜಹೀದ್ ಅಹ್ಮದ್ಜಾಯಿ ವಿದೇಶಾಂಗ ಸಚಿವರಾಗುವ ಸಾಧ್ಯತೆ ಇದ್ದು 72 ದೇಶಗಳಲ್ಲಿ ರಾಯಭಾರಿ ಕಚೇರಿ ತೆರೆಯಲು ತಾಲಿಬಾನ್ ಚಿಂತಿಸಿದೆ. ಇದನ್ನೂ ಓದಿ : ದೋಹಾದಲ್ಲಿ ಭಾರತ-ತಾಲಿಬಾನಿಗಳ ಮೊದಲ ಔಪಚಾರಿಕ ಮಾತುಕತೆ
ಅಬ್ದುಲ್ ಹಕೀಂ ಹಕ್ಕಾನಿ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ಇದೆ. ಭ್ರಷ್ಟಾಚಾರ, ಅಪರಾಧ ಕೃತ್ಯಗಳು ನಿಭಾಯಿಸಲು ಸ್ಥಳೀಯ ಮಟ್ಟದ ನ್ಯಾಯಲಯ ಸ್ಥಾಪನೆ ಮಾಡಲಿದ್ದು, ಸ್ಥಳೀಯ ಕೋರ್ಟ್‍ಗಳ ಮೂಲಕ ನ್ಯಾಯದಾನ ಮಾಡಲು ತಾಲಿಬಾನ್ ನಿರ್ಧಾರ ಮಾಡಿದೆಯಂತೆ.
ರಾಷ್ಟ್ರೀಯ ಧ್ವಜ ಮತ್ತು ಸಂವಿಧಾನದ ಬಗ್ಗೆ ಇನ್ನು ತಾಲಿಬಾನಿಗಳು ಒಮ್ಮತಕ್ಕೆ ಬಂದಿಲ್ಲ. ಹಳೆ ಸಂವಿಧಾನ ಅಥವಾ ರಾಷ್ಟ್ರ ಧ್ವಜ ಮುಂದುವರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು ಹೊಸ ಧ್ವಜ ಮತ್ತು ಸಂವಿಧಾನದ ಬಗ್ಗೆ ನೂತನ ಕ್ಯಾಬಿನೆಟ್‍ನಿಂದಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ. ಇದನ್ನೂ ಓದಿ : ಕಾಬೂಲ್ ತೊರೆಯುವ ಮುನ್ನ 73 ಏರ್ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು
ಅಫ್ಘಾನ್‍ನಲ್ಲಿ ಮಹಿಳೆಯರಿಗೂ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮಹಿಳೆಯರ ಹಕ್ಕುಗಳ ಬಗ್ಗೆ ತಾಲಿಬಾನ್ ಚಿಂತನೆ ಮಾಡಿದೆ. ಮಹಿಳೆಯರ ಹಕ್ಕುಗಳ ವಿಚಾರದಿಂದ ಜಾಗತಿಕ ಮಟ್ಟದಲ್ಲಿ ವಿರೋಧ ವ್ಯಕ್ತವಾಗುವ ಹಿನ್ನಲೆಯಲ್ಲಿ ಶಿಕ್ಷಣ ಉದ್ಯೋಗಗಳಲ್ಲಿ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಷರಿಯತ್ ಕಾನೂನು ಅಡಿಯಲ್ಲಿ ಮಹಿಳೆಯರಿಗೆ ಅವಕಾಶಕ್ಕೆ ಚಿಂತನೆ ನಡೆದಿದ್ದು ಈ ಮೂಲಕ ತಾಲಿಬಾನ್ ಬದಲಾಗಿದೆ ಎಂದು ಸಾಬೀತುಪಡಿಸುವ ಪ್ರಯತ್ನವೂ ನಡೆಯಲಿದೆ ಎನ್ನಲಾಗುತ್ತಿದೆ.