– ಅಮೆರಿಕ ಸೇನೆ ಗುರಿಯಾಗಿಸಿ ನಡೆದ ದಾಳಿ
ಕಾಬೂಲ್: ಅಫ್ಘಾನಿಸ್ತಾನದಲ್ಲಿ ನೆತ್ತರ ಕೋಡಿ ಮುಂದುವರಿದಿದ್ದು, ಇಂದು ನಡೆದ ರಾಕೆಟ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಗುರುವಾರ ನಡೆದ ಬಾಂಬ್ ಸ್ಫೋಟದಲ್ಲಿ 13 ಅಮೆರಿಕ ಸೈನಿಕರು ಸೇರಿದಂತೆ 170 ಜನರು ಸಾವನ್ನಪ್ಪಿದ್ದರು.
ಇಂದು ಸಂಜೆ ಕಾಬೂಲ್ ವಿಮಾನ ನಿಲ್ದಾಣದ ಪಶ್ಚಿಮ ರಿಹಾಯಶಿ ಇಲಾಖೆಯ ಖಾಜಾ-ಏ-ಬುಗಾರದಲ್ಲಿ ಈ ದಾಳಿ ನಡೆದಿದೆ. ಐಸಿಸ್-ಕೆ ಉಗ್ರ ಸಂಘಟನೆ ಕಾಬೂಲ್ ವಿಮಾನ ನಿಲ್ದಾಣದಲ್ಲಿರುವ ಅಮೆರಿಕ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಮುಂದಾಗಿತ್ತು. ಆದ್ರೆ ಗುರಿ ತಪ್ಪಿದ ರಾಕೆಟ್ ಜನವಸತಿ ಪ್ರದೇಶದಲ್ಲಿ ಬಿದ್ದು ಸ್ಫೋಟಗೊಂಡಿದೆ. ಆದ್ರೆ ಇದರಲ್ಲಿ ಯಾವುದೇ ಸೂಸೈಡ್ ಬಾಂಬರ್ ಗಳು ಇರಲಿಲ್ಲ ಎಂಬುದರ ಬಗ್ಗೆ ಖಚಿತ ಮಾಹಿತಿ ಪ್ರಕಟವಾಗಿಲ್ಲ.
ಕಾಬೂಲ್ ಸ್ಥಳೀಯ ಮಾಧ್ಯಮಗಳ ಪ್ರಕಾರ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮಕ್ಕಳು ಮತ್ತು ಮಹಿಳೆಯರಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಅಫ್ಘಾನ್ ಪೊಲೀಸರ ಪ್ರಕಾರ ರಾಕೆಟ್ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ ಎಂದು ಹೇಳಲಾಗುತ್ತಿದೆ. . ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್
ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರವೇ ಕಾಬೂಲ್ ಏರ್ ಪೋರ್ಟ್ ಮೇಲೆ ಉಗ್ರರ ದಾಳಿ ನಡೆಸುವ ಸಾಧ್ಯತೆಗಳಿವೆ. ಹಾಗಾಗಿ ತಮ್ಮ ದೇಶದ ಜನರು ವಿಮಾನ ನಿಲ್ದಾಣದತ್ತ ಬರಬಾರದು ಎಂದು ಹೇಳಿದ್ದರು. ಇತ್ತ ತಾಲಿಬಾನಿಗಳು ಸಹ ಐಸಿಸ್-ಕೆ ದಾಳಿ ನಡೆಸುವ ಸಾಧ್ಯತೆಗಳಿದ್ದು, ಜನರು ವಿಮಾನ ನಿಲ್ದಾಣದತ್ತ ಬರಕೂಡದು ಎಂದು ಹೇಳಿ, ಏರ್ ಪೋರ್ಟಿಗೆ ಸಂಪರ್ಕಿಸುವ ರಸ್ತೆಗಳಿಗೆ ತನ್ನ ಜನರನ್ನು ನಿಯೋಜಿಸಿತ್ತು. ಇದನ್ನೂ ಓದಿ: ಟಿವಿ, ರೇಡಿಯೋಗಳಲ್ಲಿ ಮಹಿಳೆಯ ಧ್ವನಿ ಬ್ಯಾನ್- ತಾಲಿಬಾನ್ ಆದೇಶ
ಐಎಸ್‍ಕೆಪಿ ಉಗ್ರರು ಯಾವುದೇ ಕ್ಷಣದಲ್ಲಿ ಮತ್ತಷ್ಟು ದಾಳಿಗಳನ್ನು ನಡೆಸಬಹುದು ಎನ್ನಲಾಗಿದೆ. ಈ ದಾಳಿ ನಡುವೆಯೂ ಕಾಬೂಲ್ ಏರ್ ಪೋರ್ಟ್ ನಿಂದ ಜನರ ಏರ್‍ಲಿಫ್ಟ್ ಮುಂದುವರಿದಿದೆ. ಈ ಮಧ್ಯೆ ಕಾಬೂಲ್ ಸೇರಿ ಎಲ್ಲಾ ಕಡೆ, ಬ್ಯಾಂಕ್ ಮತ್ತು ಎಟಿಎಂಗಳಿಗೆ ಜನ ಮುಗಿಬಿದ್ದಿದ್ದಾರೆ. ತಮ್ಮ ಖಾತೆಯಲ್ಲಿನ ಹಣ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಬ್ಯಾಂಕ್‍ನಲ್ಲಿ ದುಡ್ಡಿಲ್ಲ. ಎಟಿಎಂನಲ್ಲಿಯೂ ದುಡ್ಡಿಲ್ಲದೇ ಜನ ಪರದಾಡುತ್ತಿದ್ದಾರೆ. ಜನ ಆಕ್ರೋಶಗೊಳ್ಳುತ್ತಿದ್ದಂತೆ ಅವರನ್ನು ಚೆದುರಿಸಲು ತಾಲಿಬಾನ್ ಉಗ್ರರು ಬ್ಯಾಂಕ್ ಬಳಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಲ್ಲಿ ಮತ್ತೊಂದು ಪ್ರಬಲ ಬಾಂಬ್ ಸ್ಫೋಟ
ಈ ನಡುವೆ ಭಾರತದೊಂದಿಗೆ ತಾಲಿಬಾನ್ ಉತ್ತಮ ಬಾಂದವ್ಯ ಬಯಸುತ್ತಿದೆ ಅಂತ ತಾಲಿಬಾನ್ ಮುಖಂಡ ಮೊಹಮ್ಮದ್ ಅಬ್ಬಾಸ್ ಸಂದೇಶ ನೀಡಿದ್ದಾರೆ. ಈ ಎಲ್ಲದರ ಮಧ್ಯೆ, ಭಾರತ-ಅಫ್ಘಾನ್ ಸ್ನೇಹದ ಭಾಗವಾಗಿ ಹೆರಾತ್‍ನಲ್ಲಿ ಭಾರತ ಕಟ್ಟಿಸಿರುವ ಬೃಹತ್ ಅಣೆಕಟ್ಟಿಗೆ ಭೇಟಿಗೆ ತಾಲಿಬಾನಿಗಳು ಭೇಟಿ ನೀಡಿದ್ದಾರೆ. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ರಕ್ಷಣಾ ಸಚಿವ ರಾಜನಾಥ್, ಬದಲಾದ ಪರಿಸ್ಥಿತಿಯಲ್ಲಿ ನಾವೂ ವ್ಯೂಹಗಳನ್ನು ಬದಲಿಸುತ್ತಿದ್ದೇವೆ. ಎಂಥಹ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧ ಇದ್ದೇವೆ ಎಂದು ಘೋಷಿಸಿದ್ದಾರೆ.