ಮೈಸೂರು: ಜಿಲ್ಲೆಯ ಪ್ರಾಚ್ಯ ವಿದ್ಯಾ ಸಂಶೋಧನಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಅಲ್ಲಿರುವ ಹಸ್ತಪ್ರತಿಗಳ ಸಂರಕ್ಷಣೆ ಮಾಡುವ ಸಂಬಂಧ ತಜ್ಞರ ಜೊತೆ ಮಾತುಕತೆ ನಡೆಸಿದರು.
ತಾಳೆ ಗರಿಯ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವ ಕುರಿತು ಪ್ರತಾಪ್ ಸಿಂಹ ಅವರು ಪ್ರೊಫೆಸರ್ ಮುಕುಂದ್ ಅವರ ಜೊತೆ ಚರ್ಚೆ ನಡೆಸಿದರು. ಮುಕುಂದ್ ಅವರು ಬೆಂಗಳೂರಿನ ತಾರಾ ಪ್ರಕಾಶನದ ಸಂಸ್ಥಾಪಕ ಹಾಗೂ ಅಮೇರಿಕದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಪ್ರೊಫೆಸರ್ ಆಗಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಶಿವಪ್ಪ, ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಪ್ರೊಫೆಸರ್ ಎಸ್. ಶಿವರಾಜಪ್ಪ ಈ ವೇಳೆ ಉಪಸ್ಥಿತರಿದ್ದರು.
Advertisement
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಾಳೆಗರಿಯ ಹಸ್ತಪ್ರತಿಗಳನ್ನು ಮುಂದಿನ ಪೀಳಿಗೆಗೂ ಉಳಿಸಲು ಹಾಗೂ ಡಿಜಿಟಲ್ ಟಚ್ ನೀಡಿ ಹಸ್ತಪ್ರತಿಗಳನ್ನು ಪುಸ್ತಕ ರೂಪದಲ್ಲಿ ಹೊರತರಲು ಚಿಂತನೆ ನಡೆಸಲಾಗಿದೆ. ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿರುವ ಅತ್ಯಮೂಲ್ಯವಾದ ತಾಳೆಗರಿಯ ಹಸ್ತಪ್ರತಿಗಳನ್ನು ಯಥಾವತ್ತಾಗಿ ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ಅವುಗಳ ಮಹತ್ವವನ್ನು ಎಲ್ಲರಿಗೂ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಮೈಸೂರು ವಿವಿ ಮುಂದಾಗಿದ್ದು, ಇದಕ್ಕಾಗಿ ತಜ್ಞರ ಜೊತೆ ಮಾತುಕತೆ ಆರಂಭಿಸಿದೆ.