ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋದರಳಿಯ ಮನೋಜ್ ನಟನೆಯ, ನಾಗೇಶ್ ಕೋಗಿಲು ನಿರ್ಮಾಣದ ಟಕ್ಕರ್ ಚಿತ್ರಕ್ಕೆ ಒಬ್ಬೊಬ್ಬರಾಗಿ ಕಲಾವಿದರು, ತಂತ್ರಜ್ಞರು ಸೇರಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಹು ಮುಖ್ಯವಾದ ಪಾತ್ರವೊಂದಕ್ಕೆ ಕನ್ನಡ ಚಿತ್ರರಂಗದ ಪ್ರತಿಭಾವಂತ ಯುವ ಖಳನಟ ಭಜರಂಗಿ ಲೋಕಿ ನಿಕ್ಕಿಯಾಗಿದ್ದಾರೆ!
ಇನ್ನೇನು ಮುಂದಿನ ತಿಂಗಳಲ್ಲಿ ಚಿತ್ರೀಕರಣ ನಡೆಸುವ ಸೂಚನೆಗಳಿರುವ ಚಿತ್ರತಂಡ ಈಗ ಅದರ ತಯಾರಿಯಲ್ಲಿ ಬ್ಯುಸಿಯಾಗಿದೆ. ಒಂದು ಕಡೆಯಿಂದ ಕಲಾವಿದರು, ತಂತ್ರಜ್ಞರ ಆಯ್ಕೆ ಕಾರ್ಯವೂ ಬಿರುಸಿನಿಂದ ನಡೆಯುತ್ತಿದೆ. ಟಕ್ಕರ್ ಸಿನಿಮಾಗೆ ಕಿರಣ್ ಹಂಪಾಪುರ ಛಾಯಾಗ್ರಾಹಕರಾಗಿ ಆಯ್ಕೆಯಾಗಿದ್ದಾರೆ.
Advertisement
Advertisement
ಇತ್ತೀಚೆಗೆ ನಡೆದ ವೆನಿಲ್ಲಾ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ವೆನಿಲ್ಲಾ ಚಿತ್ರಕ್ಕೆ ಆಹ್ಲಾದಕರವಾದ ಛಾಯಾಗ್ರಹಣ ಮಾಡಿರೋ ಕಿರಣ್ ಹಂಪಾಪುರ ದರ್ಶನ್ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. ‘ನಾನೂ ಕೂಡಾ ಲೈಟ್ ಬಾಯ್ ಹಂತದಿಂದಲೇ ಬೆಳೆದು ಬಂದವನು. ಆ ಕಷ್ಟ ಏನೆಂದು ಚೆನ್ನಾಗಿ ಗೊತ್ತಿದೆ. ಆದರೆ ನಾನು ಆ ನಂತರ ಹೀರೋ ಆದೆ. ಈ ಕಿರಣ್ ಹಂಪಾಪುರ ಕೂಡಾ ನನ್ನದೇ ಚಿತ್ರಗಳಿಗೂ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದವನು. ಆದರೆ ಇಂದು ಆತನನ್ನು ಕ್ಯಾಮೆರಾಮನ್ ಆಗಿ ನೋಡಲು ತುಂಬಾ ಖುಷಿಯಾಗುತ್ತಿದೆ’ ಎಂಬುದು ದರ್ಶನ್ ಹಂಪಾಪುರ ಬಗ್ಗೆ ಹೇಳಿದ್ದ ಮೆಚ್ಚುಗೆ ಮಾತುಗಳ ಸಾರಾಂಶವಾಗಿತ್ತು.
Advertisement
ಒಂದು ಅನಿರೀಕ್ಷಿತ ಘಳಿಗೆಯಲ್ಲಿ ಬಣ್ಣದ ಜಗತ್ತಿನ ತೆಕ್ಕೆ ಸೇರಿಕೊಂಡು, ಇಲ್ಲಿನ ವಿವಿಧ ವಿಭಾಗಗಳಲ್ಲಿ ನಾನಾ ಕೆಲಸ ಮಾಡುತ್ತಾ ಕ್ಯಾಮರಾದತ್ತ ಬೆರಗುಗಣ್ಣಿಂದ ನೋಡಿದ್ದವರು ಕಿರಣ್ ಹಂಪಾಪುರ. ಬಹುಶಃ ಅವರು ಈ ಲೋಕಕ್ಕೆ ಮೊದಲು ಕಾಲಿಟ್ಟಿದ್ದು ನಿಖರವಾಗೊಂದು ಹೆಸರಿಡಲೂ ಸಾಧ್ಯವಾಗದ ಕೆಲಸ ಕಾರ್ಯ ಮಾಡುವ ಮೂಲಕ. ಹಾಗೆ ಕಷ್ಟದ ದಿನಗಳನ್ನೆಲ್ಲ ದಾಟಿಕೊಂಡು ಹಂತ ಹಂತವಾಗಿ ಕ್ಯಾಮರಾಗೆ ಹತ್ತಿರಾದ ಅವರಿವತ್ತು ತನ್ನ ಚೆಂದದ ಕಸುಬುದಾರಿಕೆಯಿಂದ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.
Advertisement
ಬಿ.ಎಂ ಗಿರಿರಾಜ್ ನಿರ್ದೇಶನದ ಅದ್ವೈತ, ಜಟ್ಟ, ಗೊಂಬೆಗಳ ಲವ್, ಅಮರಾವತಿ, ಬ್ಯೂಟಿಫುಲ್ ಮನಸುಗಳು, ವೆನಿಲ್ಲಾ, ಮಡಮಕ್ಕಿ, ಓ ಪ್ರೇಮವೇ ಮುಂತಾದ ಚಿತ್ರಗಳಲ್ಲಿಯೇ ತಮ್ಮ ಕೈಚಳಕ ತೋರಿಸಿದ್ದ ಕಿರಣ್ ಈಗ ಎಸ್.ಎಲ್.ಎನ್. ಕ್ರಿಯೇಷನ್ಸ್ ನಿರ್ಮಾಣದಲ್ಲಿ ರಘು ಶಾಸ್ತ್ರಿ ನಿರ್ದೇಶಿಸುತ್ತಿರುವ ಟಕ್ಕರ್ ಸಿನಿಮಾಗಾಗಿ ಕ್ಯಾಮೆರಾ ಕೈಗೆ ಹಿಡಿದಿದ್ದಾರೆ.