ಬೆಂಗಳೂರು: ಸಿಗರೇಟ್, ಪಾನ್ ಹಾಗೂ ಗುಟ್ಕಾ ಲಿಸ್ಟ್ ಗೆ ನಿಂಬೆಹಣ್ಣು ಸೇರಿದ್ದು, ಇನ್ನು ಮುಂದೆ ವಿಧಾನ ಸೌಧದೊಳಗೆ ನಿಂಬೆ ಹಣ್ಣು ತೆಗೆದುಕೊಂಡು ಹೋಗುವಂತಿಲ್ಲ.
ಹೌದು. ವಿಧಾನಸೌಧ ಮುಂಭಾಗ ಸೆಕ್ಯುರಿಟಿಯವರು ಚೆಕ್ ಮಾಡುತ್ತಿದ್ದಾರೆ. ಈ ವೇಳೆ ನಿಂಬೆ ಹಣ್ಣು ಸಿಕ್ಕರೆ ಸೆಕ್ಯುರಿಟಿಯವರು ಅದನ್ನು ತೆಗೆದುಕೊಳ್ಳುತ್ತಿರುವ ವಿಚಾರವೊಂದು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ವೇಳೆ ಬೆಳಕಿಗೆ ಬಂದಿದೆ.
ಸಾರ್ವಜನಿಕರು ತಮ್ಮ ಕೆಲಸ ಆಗಲೆಂದು ನಿಂಬೆ ಹಣ್ಣು ಹಿಡಿದುಕೊಂಡು ಬರುತ್ತಾರೆ. ಆದರೆ ಮಾಟ ಮಂತ್ರದ ಭೀತಿಗೆ ಈಗ ಮತ್ತೆ ನಿಂಬೆ ಹಣ್ಣು ಬ್ಯಾನ್ ಮಾಡಲಾಗಿದೆ. ಹೀಗಾಗಿ ಹೊರಗಡೆ ನಿಂಬೆಹಣ್ಣು ಟ್ರೇನಲ್ಲಿ ಇಟ್ಟು ವಿಧಾನ ಸೌಧಕ್ಕೆ ಹೋಗಬೇಕು. ಈ ಹಿಂದೆಯೂ ಬಿಜೆಪಿ ಸರ್ಕಾರ ಇರುವಾಗ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಇದೀಗ ಮತ್ತೆ ಕಟ್ಟುನಿಟ್ಟಾಗಿ ಪೊಲೀಸರು ಜನರನ್ನು ತಪಾಸಣೆ ಮಾಡುತ್ತಿದ್ದಾರೆ. ಆದರೆ ಈ ನಿಯಮ ನಿಂಬೆಹಣ್ಣು ಹಿಡಿದುಕೊಂಡು ಓಡಾಡೋ ಸಚಿವ ರೇವಣ್ಣನವರಿಗೆ ಅನ್ವಯವಾಗುತ್ತಾ ಎನ್ನುವ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಿಂಬೆ ಹಣ್ಣು ಭಾರೀ ಫೇಮಸ್ ಆಗಿತ್ತು. ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರು ನಿಂಬೆಹಣ್ಣು ಹಿಡಿದುಕೊಂಡು ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದರು. ಈ ವಿಚಾರ ರಾಜ್ಯಾದ್ಯಂತ ಸಖತ್ ಸುದ್ದಿಯಾಗಿತ್ತು.