VRS ತೆಗೆದುಕೊಳ್ಳಿ ಅಥವಾ ವರ್ಗಾವಣೆಯಾಗಿ – ಹಿಂದೂಯೇತರ ಸಿಬ್ಬಂದಿ ಬೇಡ: ತಿರುಪತಿ ಬೋರ್ಡ್‌

Public TV
1 Min Read
Tirumala Tirupati Devasthanams chairman BR Naidu

ತಿರುಪತಿ: ಹೊಸದಾಗಿ ರಚನೆಯಾಗಿರುವ ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿ ಉದ್ಯೋಗದಲ್ಲಿರುವ ಹಿಂದೂಯೇತರರು ಸ್ವಯಂ ನಿವೃತ್ತಿ ತೆಗೆದುಕೊಳ್ಳಬೇಕು (VRS) ಅಥವಾ ಆಂಧ್ರಪ್ರದೇಶದ ಇತರ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆಯನ್ನು ಆರಿಸಿಕೊಳ್ಳಬೇಕೆಂದು ನಿರ್ಣಯವನ್ನು ಅಂಗೀಕರಿಸಿದೆ.

ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು (BR Naidu) ಅವರು ಸೋಮವಾರ ಈಗ ನಿರ್ಧಾರವನ್ನು ದೃಢಪಡಿಸಿದ್ದಾರೆ. ಹಿಂದೂಯೇತರ ಉದ್ಯೋಗಿಗಳ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಮಂಡಳಿಯ 7 ಸಾವಿರ ಖಾಯಂ ಉದ್ಯೋಗಿಗಳ ಪೈಕಿ ಸುಮಾರು 300 ಮಂದಿಗೆ ಈ ಕ್ರಮವು ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ. ಟಿಟಿಡಿಯು ಸುಮಾರು 14,000 ಗುತ್ತಿಗೆ ಕಾರ್ಮಿಕರನ್ನು ಸಹ ನೇಮಿಸಿಕೊಂಡಿದೆ.

Tirupati temple 2

 

ಈ ನಿರ್ಧಾರವು ಆಂಧ್ರಪ್ರದೇಶದ ದತ್ತಿ ಕಾಯ್ದೆಮತ್ತು ಟಿಟಿಡಿ ಕಾಯ್ದೆಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿರುವ ಟಿಟಿಡಿ ವಿವಿಧ ನೌಕರರ ಸಂಘಗಳಿಂದ ಬೆಂಬಲವನ್ನು ಪಡೆದುಕೊಂಡಿದೆ. ಅಕ್ಟೋಬರ್ 31 ರಂದು ಟಿಟಿಡಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ನಾಯ್ಡು ಅವರು ದೇವಸ್ಥಾನವನ್ನು ಹಿಂದೂಗಳು ಮಾತ್ರ ನಡೆಸಬೇಕು ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಇನ್ಮುಂದೆ ಎರಡರಿಂದ ಮೂರು ಗಂಟೆಯಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ!

ತಿರುಮಲದಲ್ಲಿ ಕೆಲಸ ಮಾಡುತ್ತಿರುವ ಹಿಂದೂಯೇತರರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಟಿಟಿಡಿ ಹಿಂದೂ ಧಾರ್ಮಿಕ ಸಂಸ್ಥೆಯಾಗಿದ್ದು, ದೇವಸ್ಥಾನದಲ್ಲಿ ಕೆಲಸ ಮಾಡಲು ಹಿಂದೂಯೇತರರನ್ನು ನೇಮಿಸಿಕೊಳ್ಳಬಾರದು ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. ಅವರನ್ನು ಬೇರೆ ಬೇರೆ ಇಲಾಖೆಗಳಲ್ಲಿ ಸೇರಿಸಿಕೊಳ್ಳಲು ಅಥವಾ ಅವರಿಗೆ ಸ್ವಯಂ ನಿವೃತ್ತಿ ಯೋಜನೆ ನೀಡಲು ನಾವು ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ನಾಯ್ದು ತಿಳಿಸಿದರು.

ಹಲವು ವರ್ಷಗಳಿಂದ, ದೇವಸ್ಥಾನ ಮಂಡಳಿ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು ಎಂದು ಟಿಟಿಡಿ ಕಾಯ್ದೆಯನ್ನು ಮೂರು ಬಾರಿ ತಿದ್ದುಪಡಿ ಮಾಡಲಾಗಿದೆ. 1989 ರಲ್ಲಿ ಹೊರಡಿಸಲಾದ ಸರ್ಕಾರಿ ಆದೇಶವು ಟಿಟಿಡಿ-ಆಡಳಿತದ ಹುದ್ದೆಗಳಿಗೆ ನೇಮಕಾತಿಗಳನ್ನು ಹಿಂದೂಗಳಿಗೆ ಸೀಮಿತಗೊಳಿಸಬೇಕೆಂದು ಆದೇಶಿಸಿತ್ತು. ಈ ನಿಬಂಧನೆಗಳ ಹೊರತಾಗಿಯೂ, ಹಿಂದೂಯೇತರರು ದೇವಸ್ಥಾನದ ಒಳಗಡೆ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ಹೇಳಿವೆ.

 

Share This Article