ವಾಷಿಂಗ್ಟನ್: 2008ರ ಮುಂಬೈ ಭಯೋತ್ಪಾದಕ ದಾಳಿಯ (Mumbai Terror Attack) ಆರೋಪಿ ತಹವ್ವೂರ್ ರಾಣಾಗೆ ದೊಡ್ಡ ಹಿನ್ನಡೆಯಾಗಿದೆ. ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ತಡೆ ನೀಡುವಂತೆ ಸಲ್ಲಿಸಿದ್ದ ಕೊನೆಯ ಅರ್ಜಿಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಪಾಕಿಸಾನ ಮೂಲದ ಕೆನಡಾ ಪ್ರಜೆಯಾದ ರಾಣಾನನ್ನ ಸದ್ಯ ಅಮೆರಿಕದ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಡಿಟೆನ್ಶನ್ ಸೆಂಟರ್‌ನಲ್ಲಿ ಇರಿಸಲಾಗಿದೆ. ಇದನ್ನೂ ಓದಿ: Black Monday| ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ 19 ಲಕ್ಷ ಕೋಟಿ
2009ರಿಂದಲೂ ರಾಣಾನನ್ನ ಭಾರತಕ್ಕೆ ಕರೆತರಲು ಭಾರತ ಹೋರಾಡುತ್ತಿದೆ. ಇತ್ತೀಚೆಗೆ ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ ಟ್ರಂಪ್ ಮೋದಿ ಎದುರಲ್ಲೇ ಭಾರತಕ್ಕೆ ರಾಣಾನನ್ನ ಹಸ್ತಾಂತರಿಸುವುದಾಗಿ ಘೋಷಣೆ ಮಾಡಿದ್ದರು. ಇದೀಗ ಯುಎಸ್ ಸುಪ್ರೀಂ ಕೋರ್ಟ್ ನಡೆ ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಇದನ್ನೂ ಓದಿ: ಕಚ್ಚಾ ತೈಲ ದರ ಭಾರೀ ಇಳಿಕೆ- ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗುತ್ತಾ?
ಮುಂಬೈ ದಾಳಿ ಬಳಿಕ ಪಾಕ್‌ನಿಂದ ಫಲಾಯನ ಮಾಡಿದ್ದ ರಾಣಾ, ಡೆನ್ಮಾರ್ಕ್‌ನಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದಕ್ಕಾಗಿ ಆತನನ್ನ ಅಮೆರಿಕದಲ್ಲಿ ಬಂಧಿಸಲಾಗಿತ್ತು. ಕಳೆದ ಫೆಬ್ರವರಿ 27ರಂದು ರಾಣಾ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಕಳೆದ ತಿಂಗಳ ಆರಂಭದಲ್ಲಿ ನ್ಯಾಯಾಧೀಶರು ಈ ಅರ್ಜಿಯನ್ನು ತಿರಸ್ಕರಿಸಿದ್ದರು. ಬಳಿಕ ಮುಖ್ಯ ನ್ಯಾಯಮೂರ್ತಿ ರಾಬರ್ಟ್ಸ್ ಅವರಿಗೆ ಮೇಲ್ಮನವಿ ಸಲ್ಲಿಸಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ರಾಣಾ ಅರ್ಜಿಯನ್ನು ತಿರಸ್ಕರಿಸಿತು.
ನೆನಪಿದೆಯಾ ಆ ಕರಾಳ ದಿನ..?
2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ, ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನ ನಡೆಸಿ 166 ಜನರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ರಾಣಾ ಪಾತ್ರವಿದೆ ಎಂದು ಭಾರತ ಆರೋಪಿಸಿತ್ತು.
ಇದಕ್ಕೂ ಮುನ್ನ ಜನವರಿ ತಿಂಗಳಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್, ತಹವ್ವೂರ್ ರಾಣಾನ ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ, ಆತನನ್ನು ಭಾರತಕ್ಕೆ ಗಡೀಪಾರು ಮಾಡಲು ದಾರಿ ಮಾಡಿಕೊಟ್ಟಿತು. ಇದನ್ನೂ ಓದಿ: ಸಮುದ್ರದಲ್ಲಿ ಪಾಕ್ ವ್ಯಕ್ತಿಗೆ ಎದುರಾದ ಸಂಕಷ್ಟ – 3 ಗಂಟೆ ಕಾಲ ಶಸ್ತ್ರಚಿಕಿತ್ಸೆ ನೀಡಿ ಜೀವ ಉಳಿಸಿದ ಭಾರತೀಯ ನೌಕಾಪಡೆ ಸಿಬ್ಬಂದಿ