18 ದಿನಗಳ ಕಾಲ NIA ಕಸ್ಟಡಿಗೆ ರಾಣಾ – ಮಧ್ಯರಾತ್ರಿ ಕೋರ್ಟ್‌ನಲ್ಲಿ ವಾದ ಏನಿತ್ತು?

Public TV
2 Min Read
Tahawwur Rana 2

ನವದೆಹಲಿ: 2008ರ ಮುಂಬೈ ದಾಳಿಯ (Mumbai Attack) ಪ್ರಮುಖ ಸೂತ್ರಧಾರಿ ಲಷ್ಕರ್ ಉಗ್ರ ತಹಾವ್ವೂರ್‌ ರಾಣಾನನ್ನು (Tahawwur Rana) ಕೋರ್ಟ್‌ 18 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳದ (NIA) ಕಸ್ಟಡಿಗೆ ನೀಡಿದೆ.

ಅಮೆರಿಕದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ (Delhi) ಕರೆತಂದ ಬಳಿಕ ಎನ್‌ಐಎ ಬಂಧಿಸಿತು. ಬಂಧನದ ಬಳಿಕ ತಡರಾತ್ರಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.  ಇದನ್ನೂ ಓದಿ: ಹೈಟೆಕ್‌ ವಿಮಾನ, 11 ಗಂಟೆ ಪ್ರಯಾಣ – ಉಗ್ರ ರಾಣಾನನ್ನ ಅಮೆರಿಕದಿಂದ ಭಾರತಕ್ಕೆ ಕರೆತಂದಿದ್ದು ಹೇಗೆ?

ಈ ವೇಳೆ ಎನ್‌ಐಎ ಪರ ವಕೀಲರು, ಮುಂಬೈ ದಾಳಿಯ ಪಿತೂರಿಗ ಸಂಬಂಧಿಸಿದಂತೆ ಉಗ್ರ ಹೆಡ್ಲಿ (David Headley) ಮತ್ತು ರಾಣಾ ನಡುವಿನ ಇಮೇಲ್‌ ಪುರಾವೆಗಳನ್ನು ಉಲ್ಲೇಖಿಸಿದರು. ಕ್ರಿಮಿನಲ್ ಪಿತೂರಿಯ ಭಾಗವಾಗಿ ಡೇವಿಡ್ ಹೆಡ್ಲಿ ಭಾರತಕ್ಕೆ ಭೇಟಿ ನೀಡುವ ಮೊದಲು ತಹವ್ವೂರ್ ರಾಣಾನ ಜೊತೆ ಸಂಪೂರ್ಣ ಕಾರ್ಯಾಚರಣೆಯ ಬಗ್ಗೆ ಚರ್ಚಿಸಿದ್ದ. ಹೀಗಾಗಿ ಆತನನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಈ ವಾದವನ್ನು ಪುರಸ್ಕರಿಸಿದ ಕೋರ್ಟ್‌ 18 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿತು.

ಕ್ರಿಮಿನಲ್ ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ ನಡೆಸುವುದು, ಕೊಲೆ ಮತ್ತು ನಕಲಿ ದಾಖಲೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (UAPA) ಕಾಯ್ದೆಯಡಿಯಲ್ಲಿ ರಾಣಾ ಮೇಲೆ ಆರೋಪ ಹೊರಿಸಲಾಗಿದೆ. 64 ವರ್ಷದ ತಹವ್ವೂರ್ ರಾಣಾನನ್ನು ವಿಚಾರಣೆ ಎದುರಿಸಲು ಮುಂಬೈಗೆ ಸ್ಥಳಾಂತರಿಸಬಹುದು ಎಂದು ಮೂಲಗಳು ತಿಳಿಸಿವೆ.

ಮಧ್ಯರಾತ್ರಿವರೆಗೂ ನಡೆದ ವಿಚಾರಣೆ ವೇಳೆ ಎನ್‌ಐಎ ಕಚೇರಿ ಸುತ್ತಮುತ್ತ ಭಾರೀ ಪೊಲೀಸ್‌ ಭದ್ರತೆಯನ್ನು ನಿಯೋಜಿಸಲಾಗಿತ್ತು. ಇದನ್ನೂ ಓದಿ: ಬಾಂಬ್‌ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು

ಹಿರಿಯ ವಕೀಲ ದಯಾನ್ ಕೃಷ್ಣನ್ ಮತ್ತು ವಿಶೇಷ ಸಾರ್ವಜನಿಕ ಅಭಿಯೋಜಕ ನರೇಂದರ್ ಮಾನ್ ಎನ್‌ಐಎ ಪರ ವಾದಿಸಿದರು. ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಪಿಯೂಷ್ ಸಚ್‌ದೇವ ತಹವ್ವೂರ್ ರಾಣಾ ಪರ ವಾದಿಸಿದರು.

ತಹವ್ವೂರ್ ರಾಣಾನ ಯಶಸ್ವಿ ಹಸ್ತಾಂತರದ ಬಗ್ಗೆ ಮಾತನಾಡಿದ ಅಮೆರಿಕದ ವಕ್ತಾರ ಟ್ಯಾಮಿ ಬ್ರೂಸ್, ಜಾಗತಿಕ ಭಯೋತ್ಪಾದನೆಯನ್ನು ಎದುರಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತಿರುವುದರಿಂದ ಅವುಗಳ ನಡುವಿನ ಕ್ರಿಯಾಶೀಲತೆಯ ಬಗ್ಗೆ ಯುಎಸ್ ಹೆಮ್ಮೆಪಡುತ್ತದೆ ಎಂದು ಹೇಳಿದರು.

Share This Article