ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ (Shivarajkumar) ಅವರು ಕನ್ನಡ, ತೆಲುಗು ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್ ಸಿಕ್ಕ ಬೆನ್ನಲ್ಲೇ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ಮಾದಕ ವ್ಯಸನ ಜಾಗೃತಿ ಅಭಿಯಾನದಲ್ಲಿ ಪತ್ನಿ ಜೊತೆ ಶಿವರಾಜಕುಮಾರ್ ಭಾಗಿಯಾಗಿದ್ದಾರೆ. ಓದುವುದರಲ್ಲಿ ನಶೆ ಕಂಡುಕೊಳ್ಳಿ, ಮಾದಕ ವಸ್ತುವಿನ ನಶೆ ಬೇಡ ಎಂದು ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ (Drugs) ಬಗ್ಗೆ ಜಾಗೃತಿ ಮೂಡಿಸಿದರು.
ಬಲೂನ್ ಹಾರಿಸುವ ಮೂಲಕ ಅಭಿಯಾನಕ್ಕೆ ಶಿವಣ್ಣ ಚಾಲನೆ ನೀಡಿದರು. ಜಾಗೃತಿ ಅಭಿಯಾನದಲ್ಲಿ ‘ಟಗರು’ (Tagaru) ಚಿತ್ರದ ಟಗರು ಬಂತು ಟಗರು ಹಾಡಿಗೆ ನಟ ಸ್ಟೆಪ್ಸ್ ಹಾಕಿದ್ದಾರೆ. ಹಾಡು ಮತ್ತು ಡ್ಯಾನ್ಸ್ ಮೂಲಕ ರಂಜಿಸಿದ್ದಾರೆ. ಆ ನಂತರ ಮಾದಕ ವ್ಯಸನ ಬಗ್ಗೆ ಜಾಗೃತಿ ಕುರಿತು ನಟ ಮಾತನಾಡಿ, ಓದುವುದರಲ್ಲಿ ನಶೆ ಕಂಡುಕೊಳ್ಳಿ. ಮಾದಕ ವಸ್ತುವಿನ ನಶೆ ಬೇಡ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ಸರ್‌ಗೆ ಬೇಲ್ ಸಿಕ್ಕಿದ್ದು ಖುಷಿಯಾಯ್ತು: ‘ಬಿಗ್ ಬಾಸ್’ ಎಲಿಮಿನೇಷನ್ ಬಳಿಕ ಧರ್ಮ ರಿಯಾಕ್ಷನ್
ಪ್ರತಿ ಅಭಿಮಾನಿಯನ್ನು ಸ್ನೇಹಿತನನ್ನಾಗಿ ನೋಡುತ್ತೇನೆ. ಅಭಿಮಾನಿ ಅಂತ ನೋಡಿದರೆ ಬೇರೆ ರೀತಿ ನೋಡ್ಬೇಕಾಗುತ್ತೆ. ಡ್ರಗ್ಸ್‌ನಿಂದ ನಾವು ದೂರ ಇರಬೇಕು. ‘ಶಬ್ದವೇಧಿ’ ಸಿನಿಮಾದಲ್ಲಿ ಅಪ್ಪಾಜಿ ಅದ್ಬುತವಾಗಿ ಹೇಳಿದ್ದಾರೆ. ಹುಟ್ಟು ಅನ್ನೋದು ಒಂದು ಗಿಫ್ಟ್. ಅದನ್ನ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.
ನಶೆಯನ್ನು ಓದುವುದರಲ್ಲಿ ಹುಡುಕಿ, ಗೆಳೆತನದಲ್ಲಿ ಹುಡುಕಿ, ಬೇರೆ ಎಲ್ಲದರಲ್ಲೂ ನಶೆ ಇದೆ. ಮಾದಕ ವಸ್ತುವಿಗೆ ನಾವು ಎಂದು ಯಾವಾಗ ದಾಸರಾಗುತ್ತೇವೋ ಜೀವನ ಹಾಳಾಗುತ್ತದೆ. ಯಾರು ಡ್ರಗ್ಸ್ ಸೇವಿಸುತ್ತಾರೆ. ಅವರನ್ನ ಪೊಲೀಸರಿಗೆ ಹಿಡಿದುಕೊಡಿ. ಈ ಕಾಲೇಜಿಗೆ ಬಂದಿದ್ದು, ಖುಷಿ ಆಗುತ್ತಿದೆ. ನನಗೆ 62 ವರ್ಷ. ಇಲ್ಲಿಗೆ ಬಂದು ಉಲ್ಟಾ ಆಗಿ 26 ಆಗಿದೆ ಎಂದು ಖುಷಿಯಿಂದ ಶಿವಣ್ಣ ಮಾತನಾಡಿದರು.