Tag: Krishna Biregowda

  • ಅನರ್ಹ ಶಾಸಕರನ್ನು ಸೋಲಿಸಲು ಬಿಜೆಪಿಯಲ್ಲೇ ಟೀಮ್‍ಗಳು ಸಿದ್ಧವಾಗಿವೆ- ಕೃಷ್ಣಬೈರೇಗೌಡ

    ಅನರ್ಹ ಶಾಸಕರನ್ನು ಸೋಲಿಸಲು ಬಿಜೆಪಿಯಲ್ಲೇ ಟೀಮ್‍ಗಳು ಸಿದ್ಧವಾಗಿವೆ- ಕೃಷ್ಣಬೈರೇಗೌಡ

    ಚಿಕ್ಕಬಳ್ಳಾಪುರ: ಅನರ್ಹ ಶಾಸಕರನ್ನು ಸೋಲಿಸಲು ಬಿಜೆಪಿಯಲ್ಲೇ ಟೀಮ್‍ಗಳು ಸಿದ್ಧವಾಗಿವೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ಹೊರವಲಯದ ಕೆ.ವಿ.ಕ್ಯಾಂಪಸ್‍ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಬಿಜೆಪಿ ಪಕ್ಷ ಒಡೆದ ಮನೆಯಾಗಿದೆ. ಅನರ್ಹ ಶಾಸಕರು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ದಾಳಿಗೆ ಹೆದರಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಆದರೆ ಅವರನ್ನು ಸೋಲಿಸಲು ಬಿಜೆಪಿಯ ಕೆಲವರು ಪ್ಲ್ಯಾನ್ ರೂಪಿಸಿದ್ದಾರೆ ಎಂದು ಹರಿಹಾಯ್ದರು.

    ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತ ಹಾಗೂ ಅನರ್ಹ ಶಾಸಕರನ್ನು ಸಂಭಾಳಿಸುವುದರಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಾಕಾಗಿದೆ. ಅವರು ಆಪರೇಷನ್ ಕಮಲ ಮಾಡಿ ಅದರಲಲ್ಲೇ ಪಿಎಚ್ ಡಿ ಪೂರೈಸಿದ್ದಾರೆ. ರಾಜ್ಯ ಸರ್ಕಾರವು ರಾಜ್ಯದ ಜ್ವಲಂತ ಸಮಸ್ಯೆಗಳ ಕಡೆ ಗಮನ ಕೊಡುತ್ತಿಲ್ಲ. ಕೇವಲ ಉಪ ಚುನಾವಣೆಯಲ್ಲಿ ತಲ್ಲಿನವಾಗಿದೆ ಎಂದು ವಾಗ್ದಾಳಿ ನಡೆಸಿದರು.

    ckb sudhakar 1

    ಕಾಂಗ್ರೆಸ್ ಚಿಕ್ಕಬಳ್ಳಾಪುರ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಚಿಕ್ಕಬಳ್ಳಾಪುರ ಸುಧಾಕರ್ ಕಾಂಗ್ರೆಸ್‍ನಲ್ಲಿ ಎಲ್ಲ ರೀತಿಯಲ್ಲಿ ಅಧಿಕಾರ ಪಡೆದಿದ್ದಾರೆ. ಎಲ್ಲವನ್ನೂ ಪಡೆದುಕೊಂಡು ಇತ್ತೀಚೆಗೆ ಪಕ್ಷ ಬಿಟ್ಟು ಹೋಗಿದ್ದಾರೆ. ಇವರ ತಂದೆ ಕೇಶವರೆಡ್ಡಿ ಅವರಿಗೆ ಸದಸ್ಯರ ವಿರೋಧದ ನಡುವೆಯೂ ಜಿಲ್ಲಾ ಪಂಚಾಯತಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಆಪ್ತ ಮಹದೇವಪ್ಪ ಅವರು ಅನರ್ಹ ಶಾಸಕ ಸುಧಾಕರ್ ಅವರಿಗೆ ಸಾಕಷ್ಟು ಶಕ್ತಿ ತುಂಬಿದ್ದರು. ಸುಧಾಕರ್ ಅವರಿಗೆ ನಾವು ಏನು ಅನ್ಯಾಯ ಮಾಡಿದ್ವಿ? ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಯಾಪೈಸೆ ಕೂಡ ಬಂದಿಲ್ಲ. ಇವರಿಗೆ ಮಂತ್ರಿ ಆಗಬೇಕು ಎನ್ನುವ ಆಸೆ ಇತ್ತು. ಇದನ್ನು ಸಿದ್ದರಾಮಯ್ಯ ಕೂಡ ಹೇಳಿದ್ದರು. ಜನವರಿಗೆ ಸುಧಾಕರ್ ಅವರನ್ನು ಮಂತ್ರಿ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿತ್ತು. ಆದರೂ ಸಿದ್ದರಾಮಯ್ಯನವರಿಗೆ ವಂಚಿಸಿ ಸುಧಾಕರ್ ಪಕ್ಷ ಬಿಟ್ಟು ಹೋದರು. ಪಕ್ಷದಲ್ಲಿ ಎಲ್ಲವನ್ನೂ ಪಡೆದುಕೊಂಡು ಈಗ ಅಧಿಕಾರದ ಲಾಲಸೆಗೊಸ್ಕರ ಬಿಜೆಪಿಗೆ ಹೋಗಿದ್ದಾರೆ ಎಂದು ಆರೋಪಿಸಿದರು.

    BJP CONGRESS FLAG

    ಸುಧಾಕರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೂ ಮಾತು ಕೊಟ್ಟು ಈಗ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ತಾಲೂಕಿನ ಜನ ಕಾಂಗ್ರೆಸ್ ಪಕ್ಷ ನಂಬಿ ಸುಧಾಕರ್ ಅವರಿಗೆ ಮತ ಹಾಕಿದರೆ, ಅವರು ಜನರ ಮತಗಳನ್ನು ಮಾರಿಕೊಂಡರು. ಇವರು ಅನರ್ಹರು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈಗ ಅನರ್ಹರನ್ನು ಜನತಾ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಇವರನ್ನು ಮತ್ತೆ ಗೆಲ್ಲಿಸಿದರೆ ನಮ್ಮಂತಹ ಮೂರ್ಖರು ಇನ್ನೊಬ್ಬರು ಇರಲ್ಲ ಎಂದು ಕಿಡಿಕಾರಿದರು.

  • ಅನುದಾನ ನೀಡದಿದ್ದರೆ ಕಸ ಹಾಕಬೇಡಿ – ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

    ಅನುದಾನ ನೀಡದಿದ್ದರೆ ಕಸ ಹಾಕಬೇಡಿ – ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸ್ವಚ್ಛವಾಗಿಡಲು ನಗರದ ಹೊರವಲಯ ಗಬ್ಬು ನಾರುತ್ತಿದೆ. ನಿಮ್ಮ ಕಸ ನಮಗೆ ಬೇಡ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಇಂದು ಬೆಳ್ಳಳಿ ಕಸದ ಕ್ವಾರಿ ಸುತ್ತಮುತ್ತಲಿನ ಜನರು ಪ್ರತಿಭಟನೆ ಮಾಡಿದರು.

    ಬೆಂಗಳೂರಿನ ಕೋಗಿಲು ಕ್ರಾಸ್ ಸಮೀಪದಲ್ಲಿರುವ ಬೆಳ್ಳಳಿ ಕಸದ ಕ್ವಾರಿ ಅಲ್ಲಿನ ಜನರನ್ನು ನರಕಕ್ಕೆ ದೂಡುತ್ತಿದೆ. ನಗರದ ಬಹುತೇಕ ಶೇ.70 ರಷ್ಟು ಕಸ ಬೆಳ್ಳಳ್ಳಿ ಕ್ವಾರಿಗೆ ಸುರಿಯಲಾಗುತ್ತಿದೆ. ಪರಿಣಾಮ ಸುತ್ತಮುತ್ತ ಜನರು ಗಬ್ಬುನಾತ, ಸೊಳ್ಳೆ ಮತ್ತು ಕೊಳಚೆ ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ಹೀಗಿರುವಾಗ ಜನರ ಅಭಿವೃದ್ಧಿಗಾಗಿ ನೀಡಬೇಕಾದ ಅನುದಾನವನ್ನು ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರು ಇದ್ದಾರೆ ಎಂದು ನೀಡುತ್ತಿಲ್ಲ ಎಂದು ಧರಣಿ ನಡೆಸಿದರು.

    protest 3

    ಮಾಜಿ ಸಚಿವ ಕೃಷ್ಣಬೈರೆಗೌಡ ನೇತೃತ್ವದಲ್ಲಿ ಕಾರ್ಪೋರೇಟರ್ ಚೇತನ್ ಸೇರಿದಂತೆ ಹಲವರು ಧರಣಿ ನಡೆಸಿದರು. ದೋಸ್ತಿ ಸರ್ಕಾರ ಕ್ವಾರಿ ಸುತ್ತಲಿನ ಅಭಿವೃದ್ಧಿಗಾಗಿ ನೀಡಿದ 120 ಕೋಟಿ ರೂ ಅನುದಾನ ಕಡಿತಗೊಳಿಸಿದೆ. ಜೊತೆಗೆ ಇತರ 200 ಕೋಟಿ ರೂ. ಅನುದಾನವನ್ನು ರದ್ದು ಮಾಡಿದೆ. ಇದರಿಂದ ಕ್ಷೇತ್ರದ ಜನರ ಜೀವನ ನರಕವಾಗಿದೆ ಎಂದು ಆಕ್ರೋಶ ಹೊರಹಾಕಿದರು.

    protest 2

    ಸುತ್ತಲಿನಿಂದ ನೂರಾರು ಜನರು ಸುರಿಯೋ ಮಳೆಯಲ್ಲೂ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಮತ್ತೊಂದು ಮಂಡೂರು ಮಾಡಲು ನಮ್ಮೂರು ಬಿಡಲ್ಲ ಎಂದು ಜನರು ಉಗ್ರ ಹೋರಾಟ ಮಾಡಿದರು. ಸ್ಥಳಕ್ಕೆ ಘನ ತ್ಯಾಜ್ಯವಿಲೇವಾರಿ ವಿಶೇಷ ಆಯುಕ್ತ ರಂದೀಪ್ ಕರೆಸಿ ಕಸ ಸುರಿಯೊದು ನಿಲ್ಲಿಸಿ ಎಂದು ಆಗ್ರಹಿಸಿದರು.

  • ತಿಂಗಳ 4ನೇ ಶನಿವಾರ ಸರ್ಕಾರಿ ರಜೆ – ಸಿಇಟಿ ಮಾದರಿಯಲ್ಲಿ ಸಿ, ಡಿ ನೌಕರರ ವರ್ಗಾವಣೆ

    ತಿಂಗಳ 4ನೇ ಶನಿವಾರ ಸರ್ಕಾರಿ ರಜೆ – ಸಿಇಟಿ ಮಾದರಿಯಲ್ಲಿ ಸಿ, ಡಿ ನೌಕರರ ವರ್ಗಾವಣೆ

    ಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಸರ್ಕಾರಿ ಉದ್ಯೋಗಿಗಳಿಗೆ 4ನೇ ಶನಿವಾರವೂ ಸರ್ಕಾರಿ ರಜೆ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.

    ಸರ್ಕಾರವನ್ನು ಮತ್ತೆ ಅಭಿವೃದ್ಧಿ ಹಳಿಗೆ ತರಲು ಹಾಗೂ ತಮ್ಮ ಗ್ರಾಮವಾಸ್ತವ್ಯಕ್ಕೆ ಮುಂಚೆ ಎಂಬಂತೆ ಸಿಎಂ ಕುಮಾರಸ್ವಾಮಿ ಅವರು ಇವತ್ತು ಕ್ಯಾಬಿನೆಟ್ ಸಭೆ ನಡೆಸಿದರು. ಸಭೆಯ ಬಳಿಕ ಮಾಧ್ಯಮಗಳಿಗೆ ಸಚಿವ ಕೃಷ್ಣಬೈರೇಗೌಡ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು.

    ಸಂಪುಟದ ನಿರ್ಧಾರಗಳು
    17 ರಿಂದ 18 ರಾಜ್ಯಗಳು ಐದು ದಿನಗಳ ಕೆಲಸದ ದಿನಗಳನ್ನು ಪಾಲನೆ ಮಾಡುತ್ತಿವೆ. ಇನ್ನು ಕೆಲವು ರಾಜ್ಯಗಳಲ್ಲಿ ಎರಡು ಶನಿವಾರ ರಜೆ ದಿನ ನೀಡುತ್ತಿವೆ. ನಮ್ಮ ರಾಜ್ಯದಲ್ಲಿ ನಾಲ್ಕನೇ ಶನಿವಾರ ಸರ್ಕಾರಿ ರಜೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಇನ್ನು ಮುಂದೆ ನಾಲ್ಕನೇ ಶನಿವಾರ ಸರ್ಕಾರಿ ರಜೆ ದಿನವಾಗಿದೆ. ಆದರೆ ಸರ್ಕಾರಿ ನೌಕರರಿಗೆ ನೀಡಿದ್ದ ವರ್ಷಕ್ಕೆ 15 ದಿನಗಳ ಸಾಂದರ್ಭಿಕ ರಜೆ(ಸಿಎಲ್) 10 ದಿನಗಳಿಗೆ ಇಳಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

    krishna byre gowda

    ಜಿಂದಾಲ್ ಸಂಸ್ಥೆಯಲ್ಲಿ ಕನ್ನಡಿಗರು ಮತ್ತು ಸ್ಥಳೀಯರಿಗೆ ಉದ್ಯೋಗ ಕೊಡುವುದನ್ನು ಖಾತ್ರಿ ಪಡಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಜಿಂದಾಲ್ ಸಂಸ್ಥೆಗೆ 3,600 ಎಕರೆ ಜಮೀನನ್ನು ಲೀಸ್ ಕಂ ಸೇಲ್ ಡೀಡ್ ಮಾಡಿಕೊಡಬೇಕು ಎಂದು 2006ರಲ್ಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದ ಮೇರೆಗೆ ಜಿಂದಾಲ್ ಸಂಸ್ಥೆ ಕರಾರು ಒಪ್ಪಂದದ ಷರತ್ತುಗಳನ್ನು ಪೂರ್ಣಗೊಳಿಸಿರುವ ಕಾರಣ ಅನಿವಾರ್ಯವಾಗಿ ಭೂಮಿ ಕ್ರಯ ಮಾಡಿಕೊಡಲಾಗುತ್ತಿದೆ ಎಂದು ಸಚಿವರು ಸ್ಪಷ್ಟನೆ ಕೊಟ್ಟರು.

    ಗ್ರೂಪ್ ಸಿ ಮತ್ತು ಡಿ ನೌಕಕರ ವರ್ಗಾವಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ತೀರ್ಮಾನ ಮಾಡಿದ್ದು. ಅದಕ್ಕಾಗಿ ಕರಡು ಕಾನೂನು ಜಾರಿಗೆ ತರಲು ಸಂಪುಟ ನಿರ್ಧಾರ ಮಾಡಿದೆ. ಈ ಕಾನೂನು ಬರುವ ಅಧಿವೇಶನದಲ್ಲಿ ಜಾರಿಗೆ ಮಾಡಿ ಸಿಇಟಿ ಮಾದರಿಯಲ್ಲೇ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಆದರೆ ಸಿ ಗ್ರೂಪ್‍ಗೆ 5 ವರ್ಷ ಡಿ ಗ್ರೂಪ್‍ಗೆ 7 ವರ್ಷ ಕನಿಷ್ಠ ವರದಿ ನಿಗದಿ ಮಾಡಲಾಗಿದೆ. ಬೀದರ್, ಕಲಬುರ್ಗಿ, ಯಾದಗಿರಿ, ಉತ್ತರ ಕನ್ನಡ, ಕೊಡಗು, ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಖಾಲಿ ಹುದ್ದೆಗಳಿದ್ದು, ಖಾಲಿ ಇರುವ ಎಲ್ಲ ಜಿಲ್ಲೆಗಳಿಗೂ ನೌಕರರನ್ನು ನೇಮಕಾತಿ ಮಾಡಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

    vidhan soudha

    ರಾಜ್ಯದಲ್ಲಿ 16 ಸಾವಿರ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಮಾಡಿ ಅವುಗಳ ನಿರ್ವಹಣೆ ಮಾಡಲು ಗ್ರಾಮ ಪಂಚಾಯತ್‍ಗಳಿಗೆ ವಹಿಸಲಾಗಿತ್ತು. ಆದರೆ ಗ್ರಾಮ ಪಂಚಾಯತ್‍ಗಳು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಆದರ ಮೇಲೆ ಆರೋಪಗಳು ಬಂದಿವೆ. ಹೀಗಾಗಿ ಮಾರ್ಗಸೂಚಿ ಸಿದ್ದಪಡಿಸಿ, ನಿರ್ವಹಣೆ ಮಾಡಲು ಟೆಂಡರ್ ಮೂಲಕ ಖಾಸಗಿಯವರಿಗೆ ಹೊರಗುತ್ತಿಗೆ ನೀಡಲು ನಿರ್ಧಾರ ಮಾಡಲಾಗಿದೆ. ಶುದ್ಧಕುಡಿಯುವ ನೀರಿನ ಘಟಕಗಳಲ್ಲಿ ಕಾಯಿನ್‍ನಿಂದ ಸ್ಮಾರ್ಟ್ ಕಾರ್ಡ್‍ಗೆ ಮಾರ್ಪಾಡು ಮಾಡಲು ತೀರ್ಮಾನ ಮಾಡಲಾಗಿದೆ. ಘಟಕದ ರಿಪೇರಿಗೆ ಸರಾಸರಿ 3 ಸಾವಿರ ನೀಡಲು ಒಪ್ಪಿಗೆ ನೀಡಿದ್ದು 5 ವರ್ಷಕ್ಕೆ 233 ಕೋಟಿ ಅನುದಾನ ಇದಕ್ಕಾಗಿ ನೀಡಲಾಗಿದೆ ಎಂದು ವಿವರಿಸಿದರು.

    ಕೆಪಿಎಸ್ಸಿ 1998 ಗೆಜೆಟೆಡ್ ಪ್ರೊಬೆಷನರಿ ನೇಮಕ ವಿವಾದ ಬಗ್ಗೆ ಕ್ಯಾಬಿನೆಟ್‍ನಲ್ಲಿ ಚರ್ಚೆ ಮಾಡಿದ್ದು, ಅಧಿಕಾರ ಪಡೆದವರು, ವಂಚಿತರು ಇಬ್ಬರಿಗೂ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಬಗ್ಗೆ ಕಳೆದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೆ ಆ ತೀರ್ಮಾನದ ವಿರುದ್ಧ 1999, 2004 ರಲ್ಲಿ ಪ್ರಮೋಷನ್ ಆದವರು ದೂರು ನೀಡಿದ್ದರು. ಹೀಗಾಗಿ ಅವರಿಗೂ ತೊಂದರೆಯಾಗದಂತೆ ಅನುಷ್ಠಾನದ ವೇಳೆ ಭರ್ತಿ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

    Karnataka Government Employees 2

    ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆಲ ಭಾಗಕ್ಕೆ ಅಂತರ್ಜಲಮಟ್ಟ ಹೆಚ್ಚಳಕ್ಕೆ ಬೆಂಗಳೂರು ತ್ಯಾಜ್ಯ ಸಂಸ್ಕರಣ ನೀರು ಮೂಲಕ ಕೆರೆ ತುಂಬಿಸುವ ಮೊದಲನೇ ಹಂತದಲ್ಲಿ 20 ಕೆರೆಗಳು ತುಂಬಿವೆ. ಈಗ ಎರಡನೇ ಹಂತದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದ್ದು ಟೆಂಡರ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಬೆಂಗಳೂರಿನಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ತ್ಯಾಜ್ಯ ಸಂಸ್ಕರಣ ನೀರು ಹರಿಸುವ ಎರಡನೇ ಹಂತದ ಯೋಜನೆಗೆ 455 ಕೋಟಿ ರೂನ್ನು ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದರು.

    ಈ ಸಚಿವ ಸಂಪುಟ ಸಭೆಯಲ್ಲಿ ಸಚಿವಾಲಯದ ವರ್ಗಾವಣೆ ಬಗ್ಗೆ ಚರ್ಚೆಯಾಗಿಲ್ಲ. ಏಕೆಂದರೆ ಆದಕ್ಕೆ ಪ್ರತ್ಯೇಕ ನಿಯಮಾವಳಿಗಳಿವೆ ಇಲ್ಲೇ ಭರ್ತಿಯಾಗುತ್ತದೆ ಮತ್ತು ಇಲ್ಲೇ ವರ್ಗಾವಣೆಯಾಗಲಿದೆ. ಚರ್ಚೆಯಾಗುವುದಕ್ಕೆ ಮುಕ್ತ ಅವಕಾಶವಿದೆ ಆದ್ದರಿಂದ ಚರ್ಚೆಯಾಗಿಲ್ಲ. ಕೊಪ್ಪಳ ಮೆಡಿಕಲ್ ಕಾಲೇಜಿಗೆ 450 ಹೆಚ್ಚುವರಿ ಹಾಸಿಗೆ ನಿರ್ಮಾಣಕ್ಕೆ ಈ ಹಿಂದೆ ಒಪ್ಪಿಗೆ ನೀಡಲಾಗಿತ್ತು. ಈ ಹಿಂದೆ ನೀಡಿದ್ದ 90 ಕೋಟಿ ಕಾಮಗಾರಿ ಜೊತೆಗೆ ಹೆಚ್ಚುವರಿ 14 ಕೋಟಿ ರೂ. ಕಾಮಗಾರಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.